ಆವಿಷ್ಕಾರಗಳಿಂದ ಉಜ್ವಲ ಭವಿಷ್ಯ: ಡಾ.ಬಿ.ಎನ್.ಸುರೇಶ್

ಬೆಳ್ತಂಗಡಿ: ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಆವಿಷ್ಕಾರಗಳು ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ ಎಂದು ಚಂದ್ರಯಾನ- 2 ತಂಡದ ಸದಸ್ಯ, ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಚಾನ್ಸಲರ್ ಡಾ.ಬಿ.ಎನ್.ಸುರೇಶ್ ಹೇಳಿದರು.

ಎಸ್‌ಡಿಎಂ ಸಂಸ್ಥೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಚಂದ್ರಯಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸೋಲು ಗೆಲುವಿನ ಮೆಟ್ಟಿಲಾಗಬೇಕೇ ಹೊರತು ಸೋತೆವೆಂದು ಹಿಂದೇಟು ಹಾಕಬಾರದು. ಪ್ರಮುಖವಾಗಿ ವಿಜ್ಞಾನ ಲೋಕದಲ್ಲಿ ಮೊದಲ ಪ್ರಯತ್ನಕ್ಕೆ ಪ್ರತಿಫಲ ಸಿಗುವುದು ತುಂಬ ಕಡಿಮೆ. ಈ ಹಿಂದಿನ ವೈಫಲ್ಯಗಳಿಗೆ ಕಾರಣ ತಿಳಿದುಕೊಂಡು ಆವಿಷ್ಕಾರ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ವೈಜ್ಞಾನಿಕ ಸಂಶೋಧನೆ ಎಲ್ಲ ಕ್ಷೇತ್ರಗಳಿಗೂ ಸಹಾಯಕವಾಗುತ್ತದೆ. ಎಲ್ಲ ಕಾಲಕ್ಕೂ ಸಲ್ಲುವ ಕಾಣ್ಕೆಗಳನ್ನು ನೀಡಲು ನೆರವಾಗುತ್ತದೆ. ಭೂತಕಾಲದ ಸಂಗತಿಗಳನ್ನು ನಿಖರವಾಗಿ ತಿಳಿದುಕೊಳ್ಳಲು ಮತ್ತು ಭವಿಷ್ಯವನ್ನು ವೈಜ್ಞಾನಿಕವಾಗಿ ಸ್ಪಷ್ಟಪಡಿಸಿಕೊಳ್ಳಲು ವಿಜ್ಞಾನದ ಪ್ರಜ್ಞೆಯಿಂದ ಮಾತ್ರ ಸಾಧ್ಯ ಎಂದರು.
ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್.ಸತೀಶ್ಚಂದ್ರ ಮಾತನಾಡಿದರು. ಪ್ರೊ.ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಹೀಲಿಯಂಗೆ ಕಣ್ಣು
ಚಂದ್ರನ ಮೇಲೆ ಹೀಲಿಯಂ 3 ಇದೆ ಎಂದು ತಿಳಿದಾಗಿನಿಂದ ಹಲವು ದೇಶಗಳ ಕಣ್ಣು ಬಿದ್ದಿದೆ. ಚಂದ್ರನಿಂದ ಒಂದು ಟ್ರಕ್ ಹೀಲಿಯಂ ತಂದರೆ ಎರಡು ದಶಕ ಭೂಮಿಯ ಸಂಪನ್ಮೂಲ ಉಪಯೋಗಿಸದೆ ಕಳೆಯಬಹುದು. ದೇಶವನ್ನು ಮತ್ತಷ್ಟು ಬಲಿಷ್ಠ ದೇಶವನ್ನಾಗಿ ರೂಪಿಸಲು ಚಂದ್ರನ ಸಂಪನ್ಮೂಲ ಸಹಾಯ ಮಾಡುತ್ತದೆ ಎಂದು ಡಾ.ಬಿ.ಎನ್.ಸುರೇಶ್ ಹೇಳಿದರು.

Leave a Reply

Your email address will not be published. Required fields are marked *