ಚಂದ್ರಯಾನ-2 ಯಶಸ್ವಿ ಉಡಾವಣೆ: ನೌಕೆ ಹೊತ್ತು ನಭಕ್ಕೆ ಚಿಮ್ಮಿದ ‘ಬಾಹುಬಲಿ’, ಇಸ್ರೋ ವಿಜ್ಞಾನಿಗಳ ಶ್ರಮ ಸಾರ್ಥಕ

ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಕ್ಷೇತ್ರದ ಮಹತ್ವಾಕಾಂಕ್ಷಿ ಮಿಷನ್​ ಚಂದ್ರಯಾನ-2 ಉಡಾವಣೆ ಕನಸು ಇಂದು ನೆರವೇರಿದ್ದು ಸರಿಯಾಗಿ 2.43 ನಿಮಿಷಕ್ಕೆ ಚಂದ್ರಯಾನ-2 ನೌಕೆಯನ್ನು ಹೊತ್ತ ಬಾಹುಬಲಿ ನಭಕ್ಕೆ ಚಿಮ್ಮಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್​ಎಲ್​ವಿ ಮಾರ್ಕ್​-111 ರಾಕೆಟ್​ ಮೂಲಕ ಚಂದ್ರಯಾನ-2 ಅನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇದೊಂದು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದ್ದ ಯೋಜನೆಯಾಗಿತ್ತು. ಜು.15ರಂದು ಮುಂಜಾನೆ 2.51ಕ್ಕೆ ಉಡ್ಡಯನ ಮಾಡಲು ಇಸ್ರೋ ಸಕಲ ಸಿದ್ಧತೆಗಳನ್ನೂ ನಡೆಸಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಕೆಟ್​ ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡಿದ್ದರಿಂದ ಉಡಾವಣೆಗೂ 56 ನಿಮಿಷ ಮೊದಲು ರದ್ದುಪಡಿಸಲಾಗಿತ್ತು. ಬಳಿಕ ಅದನ್ನೆಲ್ಲ ದುರಸ್ತಿ ಪಡಿಸಿದ್ದಾಗಿ ಎರಡು ದಿನಗಳ ಹಿಂದೆ ಇಸ್ರೋ ವಿಜ್ಞಾನಿಗಳು ತಿಳಿಸಿದ್ದರು. ಶನಿವಾರ (ಜು.20) ಎರಡು ಬಾರಿ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾಗಿ ಇಸ್ರೋ ಮಾಜಿ ಮುಖ್ಯಸ್ಥ ಕಿರಣ್​ಕುಮಾರ್​ ತಿಳಿಸಿದ್ದರು.

ನಿನ್ನೆಯಿಂದಲೇ ಇಸ್ರೋ ಟ್ವೀಟ್​ ಮಾಡುವ ಮೂಲಕ ಕಾಲಕಾಲಕ್ಕೆ ಚಂದ್ರಯಾನ-2 ಉಡಾವಣೆಯ ಸಿದ್ಧತೆಗಳ ಬಗ್ಗೆ ತಿಳಿಸುತ್ತಿತ್ತು.

ಇಂದು ನಭಕ್ಕೆ ಚಿಮ್ಮಿರುವ ಚಂದ್ರಯಾನ-2 ಮಿಷನ್​ ಆಗಸ್ಟ್​ 14ಕ್ಕೆ ಚಂದ್ರನ ಕಕ್ಷೆಯತ್ತ ಸಾಗಲಿದೆ. ಸೆಪ್ಟೆಂಬರ್​ 6 ಅಥವಾ 7ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲಿದೆ ಎಂದು ಕಿರಣ್​ಕುಮಾರ್​ ತಿಳಿಸಿದ್ದಾರೆ.

ಚಂದ್ರಯಾನ-2 ಇಂದು ನಭಕ್ಕೆ

Leave a Reply

Your email address will not be published. Required fields are marked *