ಚಂದ್ರಯಾನ-2 ಉಡಾವಣೆ ರದ್ದುಗೊಳಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದ ಡಿಆರ್​ಡಿಒ ಮಾಜಿ ನಿರ್ದೇಶಕ

ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-2 ತಾಂತ್ರಿಕ ದೋಷದಿಂದ ರದ್ದುಗೊಂಡಿದೆ. ಇದೀಗ ಈ ವಿಚಾರದ ಬಗ್ಗೆ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮಾಜಿ ಸಾರ್ವಜನಿಕ ಸಂಪರ್ಕ ನಿರ್ದೇಶಕ ರವಿ ಗುಪ್ತಾ ಮಾಹಿತಿ ನೀಡಿದ್ದಾರೆ.

ಸೋಮವಾರ ಉಡಾವಣೆ ಆಗಬೇಕಿದ್ದ ಚಂದ್ರಯಾನ-2 ಸರಿಯಾದ ಸಮಯಕ್ಕೆ ರದ್ದುಗೊಂಡಿದ್ದರಿಂದ ತುಂಬ ಒಳ್ಳೆಯದಾಗಿದೆ. ದೊಡ್ಡ ಅನಾಹುತ ಆಗುವುದನ್ನು ನಮ್ಮ ವಿಜ್ಞಾನಿಗಳು ತಪ್ಪಿಸಿದ್ದಾರೆ. ಅವರ ಪ್ರಯತ್ನವನ್ನು ಶ್ಲಾಘಿಸಲೇಬೇಕು ಎಂದು ಹೇಳಿದ್ದಾರೆ.

ಚಂದ್ರಯಾನ ಉಡಾವಣೆ ಎಂಬುದು ದೊಡ್ಡ ಯೋಜನೆ. ಇದನ್ನು ಉಡಾವಣೆ ಮಾಡುವಾಗ ತಾಂತ್ರಿಕ ದೋಷ ಕಂಡುಬರುವುದು ಸಹಜ. ಅದನ್ನು ಕಂಡು ಹಿಡಿದು ಸರಿಯಾದ ಸಮಯದಲ್ಲಿ ವಿಜ್ಞಾನಿಗಳು ತಡೆ ಹಿಡಿದಿದ್ದಾರೆ. ಇದೂ ಕೂಡ ಯಶಸ್ಸೇ ಆಗಿದೆ. ಹಾಗೊಮ್ಮೆ ರದ್ದುಗೊಳಿಸದೆ ಇದ್ದರೆ ಮುಂದೆ ಏನಾದರೂ ವಿಪತ್ತು ಎದುರಾಗುವ ಸಾಧ್ಯತೆ ಇತ್ತು. ಈಗ ಉಂಟಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಿ ಹೊಸ ದಿನಾಂಕದಂದು ಉಡಾವಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಉಡಾವಣಾ ವಾಹಕವಾದ ಜಿಎಸ್​ಎಲ್​ವಿ ಎಂಕೆ-3ರಲ್ಲಿ ಕಾಣಿಸಿಕೊಂಡಿರುವ ದೋಷ ಏನು ಎಂಬ ಬಗ್ಗೆ ವಿವರವಾದ ಅಧ್ಯಯನ ಮಾಡಲಾಗುತ್ತದೆ. ಇದರ ಕುರಿತಂತೆ ವಿಜ್ಞಾನಿಗಳು ಆಳವಾಗಿ ಪರಿಶೀಲನೆ ಮಾಡಲೇಬೇಕು. ಇಂಥ ದೊಡ್ಡ ಪ್ರಮಾಣದ ಯೋಜನೆಗಳಲ್ಲಿ ಯಾವ ಕಾರಣಕ್ಕೂ ಚಾನ್ಸ್​ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಚಂದ್ರಯಾನ ಹಾಗೂ ಇಂತಹ ದೊಡ್ಡ ಬಾಹ್ಯಾಕಾಶ ನೌಕೆಯ ಪ್ರತಿ ಭಾಗವನ್ನೂ ಮತ್ತೆಮತ್ತೆ ಪರೀಕ್ಷಿಸಿರುತ್ತೇವೆ ಎಂದಿದ್ದಾರೆ.

ಹೀಗೆ ಒಮ್ಮೆಲೇ ಎದುರಾಗುವ ಸಮಸ್ಯೆಗಳಿಂದ ನಾವೂ ಕೂಡ ಹೊಸದನ್ನು ಕಲಿಯುತ್ತೇವೆ. ಹಠಾತ್​ ಆಗಿ ಎದುರಾಗುವ ಸವಾಲುಗಳನ್ನು ಎದುರಿಸುತ್ತಲೇ ವಿಜ್ಞಾನದಲ್ಲಿ ಹೆಚ್ಚಿನದನ್ನು ಸಾಧಿಸಬಹುದು. ಚಂದ್ರಯಾನ -2ರ ಉದ್ದೇಶ ಬರೀ ಚಂದ್ರನನ್ನು ತಲುಪುವದಷ್ಟೇ ಅಲ್ಲ, ನಮ್ಮ ವೈಜ್ಞಾನಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವೂ ಹೌದು ಎಂದು ಹೇಳಿದ್ದಾರೆ.

ಈ ಬಾಹ್ಯಾಕಾಶ ನೌಕೆಯಲ್ಲಿ ಸಾವಿರಾರು ಬಿಡಿ ಭಾಗಗಳು ಸಂಕೀರ್ಣವಾಗಿರುತ್ತವೆ. ಇದನ್ನೆಲ್ಲ ವಿಧಿವತ್ತಾಗಿ ಸೂಕ್ತ ಸ್ಥಳದಲ್ಲಿ ಸರಿಯಾಗಿ ಕೂರಿಸಲು ಸುಮಾರು 50 ದಿನಗಳೇ ಬೇಕಾಗಿರುತ್ತವೆ. ಈಗ ವಾಹಕದ ಎಂಜಿನ್​ನ್ನು ಹೊರತೆಗೆದು ದೋಷವನ್ನು ಪತ್ತೆ ಮಾಡಬೇಕು. ಅದಾದ ಬಳಿಕ ದುರಸ್ತಿ ಮಾಡಿ ಮರುಜೋಡಣೆಗೊಳಿಸಬೇಕು. ಎಲ್ಲವೂ ಸರಿಯಾಗಿದೆ ಎಂದ ಮೇಲಷ್ಟೇ ಚಂದ್ರಯಾನ-2 ಉಡಾವಣೆಯ ಹೊಸ ದಿನಾಂಕದ ಘೋಷಣೆ ಆಗಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *