ಚಂದ್ರಯಾನ-2 ಉಡಾವಣೆ ಅಕ್ಟೋಬರ್​ಗೆ ಮುಂದೂಡಿಕೆ: ಇಸ್ರೋ

ಚೆನ್ನೈ: ಚಂದ್ರನ ಮೂಲ ಮತ್ತು ಅದರ ವಿಕಾಸದ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್​ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.

ಇತ್ತೀಚೆಗೆ ನಡೆದ ತಜ್ಞರ ಸಭೆಯಲ್ಲಿ ಚಂದ್ರಯಾನ-2 ನೌಕೆಯನ್ನು ಮತ್ತಷ್ಟು ಪರೀಕ್ಷೆಗಳಿಗೆ ಒಳಪಡಿಸಬೇಕಿದೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಹಾಗಾಗಿ ಚಂದ್ರಯಾನ-2 ನೌಕೆಯ ಉಡಾವಣೆಯನ್ನು ಏಪ್ರಿಲ್​ ತಿಂಗಳ ಬದಲು ಅಕ್ಟೋಬರ್​ನಲ್ಲಿ ನಡೆಸಲಾಗುವುದು ಎಂದು ಇಸ್ರೋದ ಅಧ್ಯಕ್ಷ ಕೆ. ಶಿವನ್​ ತಿಳಿಸಿದ್ದಾರೆ.

ಪ್ರಧಾನಿ ಕಾರ್ಯಾಲಯದ ರಾಜ್ಯ ಮಂತ್ರಿ ಜಿತೇಂದ್ರ ಸಿಂಗ್​ ಅವರು ಚಂದ್ರಯಾನ-2 ನೌಕೆಯ ಉಡಾವಣೆ ಏಪ್ರಿಲ್​ನಲ್ಲೇ ನಡೆಯಲಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಪ್ರಯತ್ನಿಸಲಾಗುವುದು ಎಂದು ಕಳೆದ ಫೆಬ್ರವರಿ 16 ರಂದು ತಿಳಿಸಿದ್ದರು.

ಸುಮಾರು 800 ಕೋಟಿ ರೂ. ವೆಚ್ಚದ ಚಂದ್ರಯಾನ-2 ಯೋಜನೆ ಸಂಪೂರ್ಣವಾಗಿ ಸ್ವದೇಶಿಯಾಗಿದ್ದು, ಈ ಯೋಜನೆಗಾಗಿ 3,290 ಕೆಜಿ ತೂಕದ ನೌಕೆಯನ್ನು ಸಿದ್ಧಪಡಿಸಲಾಗಿದೆ. ಈ ನೌಕೆಯ ಚಂದ್ರನ ಮೇಲ್ಮೈ ರಚನೆ, ಖನಿಜಗಳ ಮಾಹಿತಿ, ಚಂದ್ರನಲ್ಲಿ ನೀರಿರುವ ಕುರಿತು ಮಾಹಿತಿಯನ್ನು ಸಂಗ್ರಹಿಸಲಿದೆ. ಭಾರತ ಚಂದ್ರಯಾನ -1 ನೌಕೆಯನ್ನು 2008ರಲ್ಲಿ ಉಡಾವಣೆ ಮಾಡಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *