ದೇಶೀಯ ಭಾಷೆ ಕತ್ತು ಹಿಸುಕುತ್ತಿದೆ ಇಂಗ್ಲಿಷ್

ಧಾರವಾಡ: ದೇಶಕ್ಕೆ ಸ್ವಾತಂತ್ರ್ಯ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್ ನಮ್ಮಿಂದ ತೊಲಗಿಲ್ಲ. ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಆತಂಕ ವ್ಯಕ್ತಪಡಿಸಿದರು.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷರ ಭಾಷಣ ಮಾಡಿದ ಅವರು, ಬಿ.ಎಂ.ಶ್ರೀ. ಅವರ ‘‘ಇಂಗ್ಲಿಷ್ ಗೀತೆಗಳ ಸ್ಫೂರ್ತಿಯಿಂದ ಭಾವಗೀತೆಗಳಿಗೆ ಸಮೃದ್ಧಿ ಬಂದರೂ ಬಹುಬೇಗ ನಮ್ಮ ಕವಿಗಳು ತಮ್ಮ ಸ್ಫೂರ್ತಿಯ ಮೂಲ ಕಂಡುಕೊಂಡರು. ನಮ್ಮ ಕವಿಗಳಿಗೆ ಪಶ್ಚಿಮದ ಹೊಸ ಸಾಹಿತ್ಯ ಪ್ರಕಾರಗಳ ಪರಿಚಯವಾಗಿ ಕೊಂಚ ಅನುಕರಿಸಿ, ತಕ್ಷಣ ಎಚ್ಚೆತ್ತು ಸದರಿ ಪ್ರಕಾರಗಳು ನಮ್ಮಲ್ಲಿ ಮೊದಲಿನಿಂದ ಇದ್ದವೆಂಬಂತೆ ಹೊಸ ಕತೆ, ಕಾದಂಬರಿ, ನಾಟಕ, ಆತ್ಮಕತೆ, ಪ್ರವಾಸ ಸಾಹಿತ್ಯ ಮುಂತಾದ ಪ್ರಕಾರಗಳು ಬಂದು ಕನ್ನಡವನ್ನು ಅಲಂಕರಿಸಿದವು. ಕಾದಂಬರಿ, ನಾಟಕ ಸಾಹಿತ್ಯವಂತೂ ಪಶ್ಚಿಮದ ಮಾದರಿಗಳೊಂದಿಗೆ ಸ್ಪರ್ಧಿಸುವಂತೆ ಬಂದವು. ಆದರೆ, ಇದೇ ಯಶಸ್ಸಿನ ಕತೆ ಶಿಕ್ಷಣದಲ್ಲಿ, ಅದರಲ್ಲೂ ವಿಜ್ಞಾನ ಶಿಕ್ಷಣದಲ್ಲಿ ಕಂಡುಬರಲಿಲ್ಲ. ಭಾರತೀಯ ಭಾಷೆಗಳ ಸಮಸ್ಯೆ ಶುರುವಾದದ್ದೇ ಇಲ್ಲಿ ಎಂದು ಹೇಳಿದರು.

ನಮ್ಮ ದೇಶದ ಆಧುನಿಕ ಚರಿತ್ರೆ ನೆನೆಯುವಾಗ ಬ್ರಿಟಿಷರನ್ನು ನೆನೆಯದೆ ಅದರಲ್ಲೂ ಶಿಕ್ಷಣ ಹಾಗೂ ಸಂಸ್ಕೃತಿಗಳ ವಿಷಯ ನೆನೆವಾಗ ಬ್ರಿಟಿಷ್ ಆಡಳಿತ ಮತ್ತು ಮೆಕಾಲೆ ಮಹಾಶಯನನ್ನು ನೆನೆಯದೆ ಮುಂದುವರಿಯುವಂತೆಯೇ ಇಲ್ಲ. ಭಾರತದ ಆಧುನಿಕ ಚರಿತ್ರೆ ಶುರುವಾದದ್ದು 1836ರಲ್ಲಿ. ಮೆಕಾಲೆಯವರು ಭಾರತೀಯರಿಗೆ ಎಂಥ ಶಿಕ್ಷಣ ಕೊಡಬೇಕೆಂದು ತೀರ್ಮಾನಿಸಲು ತಮ್ಮ ನೇತೃತ್ವದಲ್ಲಿ ಆರು ಜನರ ಒಂದು ಆಯೋಗವನ್ನು ನೇಮಿಸಿದರು. ಅದರಲ್ಲಿ ಮೂರು ಜನ ಬ್ರಿಟಿಷ್ ಪಂಡಿತರು, ಇನ್ನು ಮೂವರು ಭಾರತೀಯ ಪಂಡಿತರು. ಇವರಲ್ಲಿ ರಾಜಾರಾಮ ಮೋಹನರಾಯ್ ಒಬ್ಬರಾಗಿದ್ದರು. ಆಯೋಗದಲ್ಲಿದ್ದ ಬ್ರಿಟಿಷ್ ಸದಸ್ಯರು ಭಾರತೀಯರಿಗೆ ದೇಶೀಯ ಪದ್ಧತಿಯಲ್ಲೇ ಶಿಕ್ಷಣ ಕೊಡಬೇಕು ಎಂದು ವಾದಿಸಿದರು. ಆದರೆ, ಭಾರತೀಯ ಸದಸ್ಯರು ಭಾರತೀಯರಿಗೆ ಆಧುನಿಕ ಬ್ರಿಟಿಷ್ ಶಿಕ್ಷಣವನ್ನೇ ಕೊಡಬೇಕೆಂದು ಒತ್ತಾಯಿಸಿದರು. ಅಂತಿಮವಾಗಿ ಮೆಕಾಲೆ ತಮ್ಮ ನಿರ್ಣಾಯಕವಾದ ಅಧ್ಯಕ್ಷೀಯ ಮುದ್ರೆ ಒತ್ತಿ ಬ್ರಿಟಿಷ್ ಶಿಕ್ಷಣ ಅಳವಡಿಸಿದರು ಎಂದರು.

ನಮಗೆ ಇಂಗ್ಲಿಷ್ ಭಾಷೆ ಕಲಿಸಿದರು!

ಬ್ರಿಟಿಷರು ಬೇರೊಂದು ಬಗೆಯ ಸಂಸ್ಕೃತಿಯನ್ನು ತಂದರು; ಬೇರೊಂದು ಬಗೆಯ ರಾಜ್ಯ ವ್ಯವಸ್ಥೆಯನ್ನು ತಂದರು. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಇಂಗ್ಲಿಷ್ ಭಾಷೆ ಕಲಿಸಿದರು. ಹಿಂದೆ ಆಳಿದವರು ತಮ್ಮ ಅರೇಬಿಕ್, ಪರ್ಶಿಯನ್ ಭಾಷೆಗಳನ್ನು ನಮಗೆ ಕಲಿಸಿರಲಿಲ್ಲ. ಆದರೆ, ಇವರು ಇಂಗ್ಲಿಷ್ ಅನ್ನು ಕಡ್ಡಾಯವಾಗಿ ಕಲಿಸಿದರು. ಇಂಗ್ಲಿಷ್ ಬರುವ ತನಕ ನಮಗೆ ಸಂಸ್ಕೃತವೇ ಜ್ಞಾನದ ಭಾಷೆಯಾಗಿತ್ತು ಎಂದರು.

ಶಿವರಾಮ ಕಾರಂತರು, ಕುವೆಂಪು ನೆನೆಯಲೇಬೇಕು

ನಮ್ಮ ಭಾಷೆಗೆ ಮಾರ್ಗದರ್ಶನ ಮಾಡಿದ ಇಬ್ಬರು ದಾರ್ಶನಿಕರನ್ನು ನಾವು ನೆನೆಯಲೇಬೇಕು; ಒಬ್ಬರು ಶಿವರಾಮ ಕಾರಂತರು, ಇನ್ನೊಬ್ಬರು ಕುವೆಂಪು ಅವರು. ಶಿವರಾಮ ಕಾರಂತರು ಕನ್ನಡದ ಮೂಲಕ ವಿಜ್ಞಾನದ ತಿಳಿವಳಿಕೆ ಸಾಧ್ಯವೆಂದು, ಅದು ನಮ್ಮ ಇಂದಿನ ಅಗತ್ಯವೆಂದು ತೋರಿಸಲು ವಿಜ್ಞಾನ ಪ್ರಪಂಚ ಬರೆದರು. ಹಾಗೆಂದೇ ಕುವೆಂಪು ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಅವರ ವಿಜ್ಞಾನದ ತಿಳಿವಳಿಕೆಯನ್ನು ಜನಸಾಮಾನ್ಯರಿಗೆ ಕನ್ನಡ ಭಾಷೆಯಲ್ಲಿ ತಿಳಿಸಬೇಕೆಂದು ಹಳ್ಳಿಗಳಲ್ಲಿ ಅವರ ಭಾಷಣಗಳನ್ನು ಏರ್ಪಡಿಸಿದರು. ಹಾಗೂ ಆ ಭಾಷಣಗಳನ್ನು ಬರೆಸಿ ಚಿಕ್ಕ ಪುಸ್ತಿಕೆಗಳಾಗಿ ಪ್ರಕಟಿಸಿ, ವಿಜ್ಞಾನದ ಪ್ರಚಾರ ಕಾರ್ಯ ಶುರು ಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಈ ನಾಲ್ಕಾಣೆ ಮಾಲೆ ಎಷ್ಟು ಜನಪ್ರಿಯವಾಯಿತೆಂದರೆ ಈ ಪುಸ್ತಿಕೆಗಳನ್ನು ಮನೆಯಲ್ಲಿಟ್ಟುಕೊಳ್ಳುವುದೇ ಒಂದು ಘನತೆಯಾಯಿತು. ಇದೇ ಹುರುಪಿನಲ್ಲಿ ನಮ್ಮ ಪ್ರಾಧ್ಯಾಪಕರು ವಿಜ್ಞಾನವನ್ನು ಶಾಲೆ-ಕಾಲೇಜುಗಳಲ್ಲಿ, ಕನ್ನಡದಲ್ಲಿ ಬೋಧನೆ ಮಾಡಿದ್ದರೆ ಇವತ್ತಿನ ನಮ್ಮ ಭಾಷೆ ಸಮಸ್ಯೆ ಇರುತ್ತಿರಲಿಲ್ಲ ಎಂದರು.

ಸ್ನೇಹಿತರಾದ ಕಲಬುರ್ಗಿ, ಗಿರಡ್ಡಿ ನೆನೆದ ಕಂಬಾರರು

ಧಾರವಾಡದ ಎಲ್ಲ ಪೂಜ್ಯ ಹಿರಿಯರೇ, ನಾಡಿನ ಸನ್ಮಾನ್ಯರೇ, ಸಾಹಿತ್ಯ ಸಂಸ್ಕೃತಿ ಸಹೃದಯರೇ ನಾನು ನಿಮ್ಮವನು. ಇದೇ ನೆಲದಲ್ಲಿ ನಿಮ್ಮೆದುರಿನಲ್ಲಿಯೇ ಓಡಾಡಿ ನಿಮ್ಮಿಂದಲೇ ನಾಲ್ಕಕ್ಷರ ಕಲಿತು ದೊಡ್ಡವನಾದವನು. ನನಗೆ ಕಲಿಸಿದ ಗುರುಗಳೊಬ್ಬರೂ ಈಗ ನನ್ನೆದುರಿಗಿಲ್ಲ ನಿಜ, ಸಾಲದ್ದಕ್ಕೆ ನನ್ನಿಬ್ಬರು ಸ್ನೇಹಿತರಾದ ಕಲಬುರ್ಗಿ ಮತ್ತು ಗಿರಡ್ಡಿ ಅವರನ್ನೂ ಕಳೆದುಕೊಂಡು ಹತಾಶ ಭಾವದಿಂದ ನಿಂತ ನನ್ನನ್ನು ಅವರೆಲ್ಲರ ಚೇತನಗಳು ಆಶೀರ್ವದಿಸುತ್ತಿವೆಯೆಂಬ ನಂಬಿಕೆಯಿಂದ ಒಂದೆರಡು ನುಡಿಗಳನ್ನಾಡುತ್ತೇನೆ; ಸಹನೆಯಿಂದ ಕೇಳುವಿರಾಗಿ ನಂಬಿದ್ದೇನೆ ಎಂದು ಸ್ಮರಿಸಿದರು.