ಸಂತರಿಗೂ ಮಾರ್ಗದರ್ಶಕರಾಗಿದ್ದ ಶ್ರೀಗಳು

ಚಿಕ್ಕಮಗಳೂರು: ಭಾರತೀಯ ಸಮಾಜದಲ್ಲಿ ಸೇವೆ ಮೂಲಕ ಯುಗ ಪುರಷನಾಗಿ ಗುರುತಿಸಿಕೊಂಡಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಸಂತರಿಗೂ ಮಾರ್ಗದರ್ಶಕರಾಗಿದ್ದರು ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಮಹಾಸಭಾ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಸಮಾಜದಲ್ಲಿ ಯಾವ ರೀತಿ ಬದಲಾವಣೆ ತರಬೇಕು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟ ಜಗದ್ಗುರು. ಪೂಜೆ ಅಂತರಂಗ ಶುದ್ಧಿಗಾದರೆ, ಸಮಾಜದ ಬದಲಾವಣೆಗೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕೆಂಬ ಉದ್ದೇಶ ಅವರದಾಗಿತ್ತು. ಶಿಕ್ಷಣದ ಮೂಲಕ ಬಡವರಿಗೂ ಬೆಳಕು ನೀಡಿದ ಜನ್ಮದಾತರರಾಗಿದ್ದರು. ಸಾಧನೆಗಾಗಿ ತಮ್ಮ ಜೀವನವನ್ನು ಪರಿಪೂರ್ಣ ಬಳಸಿ ದೇಶದ ಏಕತೆಗಾಗಿ ಮಾತೃ ಹೃದಯಿಯಾಗಿ ನಿರಂತರ ಶ್ರಮಿಸಿದರು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ತಮ್ಮಯ್ಯ ಮಾತನಾಡಿ, ಸರ್ಕಾರದ ನೆರವಿಲ್ಲದೆ ಎಲ್ಲ ಜಾತಿ, ಧರ್ಮದ ಬಡವವರಿಗೆ ಅಕ್ಷರ ಜ್ಞಾನ ನೀಡಿ ಲಕ್ಷಾಂತರ ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಲು ನೆರೆವಾಗಿದ್ದಾರೆ. ಪ್ರಪಂಚ ಶಾಶ್ವತವಾಗಿ ನೆನಪಿಟ್ಟುಕೊಳ್ಳುವ ಕೆಲಸ ಮಾಡಿ ಸಿದ್ಧಗಂಗಾ ಶ್ರೀಗಳು ಎಲ್ಲ ಮಠಾಧಿಪತಿಗಳಿಗೆ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.

ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ: ತ್ರಿವಿಧ ದಾಸೋಹಿ, ನಿಷ್ಕಾಮ ಕರ್ಮಯೋಗಿ, ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಜಿಲ್ಲಾ ಕಸಾಪ ಸದಸ್ಯರು ಒತ್ತಾಯಿಸಿದರು.

ಕೆಂಪನಹಳ್ಳಿ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ಧಗಂಗಾ ಶ್ರೀಗಳ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಲಾಯಿತು. ಶ್ರೀಗಳು ಅಕ್ಷರ, ಜ್ಞಾನ, ಅನ್ನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳು ಮತ್ತು ಕುಟುಂಬಗಳಿಗೆ ಬೆಳಕಾಗಿದ್ದಾರೆ. ಸಮಾಜ ಸೇವೆ ಮೂಲಕ ದೇಶಕ್ಕೆ ಆದರ್ಶರಾಗಿರುವ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದಿರುವುದು ನಮ್ಮೆಲ್ಲರ ದೌರ್ಭಾಗ್ಯ ಎಂದರು.