ಕನ್ನಡದ ಕಂಬಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಟ್ಟ

ಬೆಂಗಳೂರು: ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಸೋಮವಾರ ಆಯ್ಕೆಯಾಗಿದ್ದಾರೆ.

ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ 89 ಮತ ಚಲಾವಣೆಯಾಗಿದ್ದು, ಇದರಲ್ಲಿ ಕಂಬಾರರು 56 ಮತ ಪಡೆದು ಜಯಭೇರಿ ಬಾರಿಸಿದರು. ಎದುರಾಳಿಗಳಾದ ಒಡಿಶಾದ ಹಿರಿಯ ಲೇಖಕಿ ಪ್ರತಿಭಾ ರೈ 29 ಹಾಗೂ ಮರಾಠಿಯ ಖ್ಯಾತ ಲೇಖಕ ಪೊ›. ಬಾಲಚಂದ್ರ ನೇಮಾಡಿ 4 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಎರಡು ದಶಕದ ಬಳಿಕ ಕನ್ನಡಿಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ ಲಭಿಸಿದೆ. ಈ ಹಿಂದೆ ಡಾ.ವಿ.ಕೃ.ಗೋಕಾಕ್ (1983) ಹಾಗೂ ಡಾ.ಯು.ಆರ್.ಅನಂತಮೂರ್ತಿ (1993) ಅಕಾಡೆಮಿ ಚುಕ್ಕಾಣಿ ಹಿಡಿದಿದ್ದರು.

5 ವರ್ಷ ಕೇಂದ್ರದಲ್ಲಿ ಕನ್ನಡ ಕಹಳೆ

ಹಿಂದೆಯೇ ದಕ್ಷಿಣ ಭಾರತದ ಬಹುತೇಕ ಲೇಖಕರು, ಡಾ. ಚಂದ್ರಶೇಖರ ಕಂಬಾರರು ಈ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಸಾಹಿತ್ಯ ವಲಯದ ಲೆಕ್ಕಾಚಾರದಂತೆ ಆಯ್ಕೆಯಾಗಿರುವ ಕಂಬಾರರು ಮುಂದಿನ 5 ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ 10 ವರ್ಷ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿವಿಧ ಜವಾಬ್ದಾರಿಗಳನ್ನು ಕಂಬಾರರು ನಿಭಾಯಿಸಿದ್ದರು. ಅಲ್ಲದೆ, 2013ರಿಂದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಉಪಾಧ್ಯಕ್ಷರಾಗಿ ಮಾಧವ್ ಕೌಶಿಕ್

ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರಾಗಿ ಚಂಡೀಘಡದ ಹಿಂದಿ ಲೇಖಕ ಮಾಧವ್ ಕೌಶಿಕ್ ಮುಂದಿನ ಐದು ವರ್ಷ ಅವಧಿಗೆ ಆಯ್ಕೆಯಾಗಿದ್ದಾರೆ. ಅವರಿಗೆ 89 ಮತಗಳಲ್ಲಿ 58 ಮತ ದೊರೆತವು. ಸಾಹಿತಿ ನಂದಕಿಶೋರ್ ಅವರು ಮಾಧವ್ ಕೌಶಿಕ್ ವಿರುದ್ಧ ಸ್ಪರ್ಧಿಸಿದ್ದರು. ನಿಯಮದ ಪ್ರಕಾರ ದಕ್ಷಿಣದವರು ಅಧ್ಯಕ್ಷ ಸ್ಥಾನ ಅಲಂಕರಿಸಿದರೆ ಉತ್ತರದವರು ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುವುದು ಕನ್ನಡಕ್ಕೆ ಮತ್ತೊಂದು ಕಿರೀಟ ಬಂದಂತಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಸರ್ಕಾರದ ವತಿಯಿಂದ ಅಭಿನಂದನೆಗಳು.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಆಯ್ಕೆ ಪ್ರಕ್ರಿಯೆ ಹೇಗೆ ?

ಅಕಾಡೆಮಿ ಕಾರ್ಯಕಾರಿ ಸಮಿತಿ ತನ್ನ ಅವಧಿ ಮುಗಿಸುವ ಎರಡು ತಿಂಗಳ ಮುನ್ನ ಹೊಸ ಗೌರ್ನಿಂಗ್ ಕೌನ್ಸಿಲ್ ಮತ್ತು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುತ್ತದೆ. ದೇಶದ 20 ವಿಶ್ವವಿದ್ಯಾಲಯಗಳಿಂದ ತಲಾ ಮೂವರ ಹೆಸರನ್ನು ಕಳುಹಿಸಲಾಗುತ್ತದೆ. ಅದೇ ರೀತಿ ರಾಜ್ಯಗಳ ಸಾಹಿತ್ಯ ಪರಿಷತ್, ಅಕಾಡೆಮಿ ಸೇರಿ ಮೂರು ಸಾಹಿತ್ಯಿಕ ಸಂಸ್ಥೆಗಳಿಂದ ತಲಾ ಮೂವರು ಸಾಹಿತಿಗಳ ಹೆಸರನ್ನು ಕಳುಹಿಸಲಾಗುತ್ತದೆ. ವಿಶ್ವವಿದ್ಯಾಲಯ ಹಾಗೂ ಸಾಹಿತ್ಯ ಚಟುವಟಿಕೆ ಕೇಂದ್ರದಿಂದ ಬಂದ ಹೆಸರುಗಳಲ್ಲಿ ತಲಾ ಒಂದು ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದವರೇ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿ ಹೊಸ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತಾರೆ. 2018 ರಿಂದ 2023ರ ಅವಧಿಗೆ ಆಯ್ಕೆ ಆಗಿರುವ 95 ಮಂದಿ ಸದಸ್ಯ ಪ್ರತಿನಿಧಿಗಳಲ್ಲಿ 89 ಸದಸ್ಯರು ಮತಚಲಾಯಿಸಿದ್ದಾರೆ.

ಕುಹಕವನ್ನೇ ಸವಾಲಾಗಿ ಸ್ವೀಕರಿಸಿದ ಛಲಗಾರ

‘ಚಿಕ್ಕಂದಿನಲ್ಲಿ ನಾವು ಹೊಂಡದ ನೀರಿನಲ್ಲಿ ನಮ್ಮ ಮುಖ ನೋಡಿಕೊಳ್ಳುತ್ತಿದ್ದೆವು. ಹಾಗೆ ನೋಡುವಾಗ ನಮಗೆ ನಮ್ಮ ಮುಖ ಮಾತ್ರ ಕಾಣಿಸುತ್ತಿರಲಿಲ್ಲ, ಮೇಲಿನ ಆಕಾಶ, ಚುಕ್ಕಿ-ಚಂದ್ರಮ, ಸುತ್ತಲ ಮರಗಿಡ, ಬಳ್ಳಿ, ಪಕ್ಷಿ-ಪ್ರಾಣಿ, ಅಕ್ಕಪಕ್ಕ ನಿಂತ ಜನ ಎಲ್ಲ ಕಾಣಿಸುತ್ತಿತ್ತು. ಈಗ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವಾಗ ನಮ್ಮ ಮುಖ ಮಾತ್ರ ಕಾಣಿಸುತ್ತದೆ. ವ್ಯಕ್ತಿಕೇಂದ್ರಿತವಾದ ನವ್ಯ ಸಾಹಿತ್ಯ, ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಕ್ರಮ. ನನ್ನದು ಹೊಂಡದ ನೀರಿನಲ್ಲಿ ಮುಖ ನೋಡಿಕೊಳ್ಳುವ ರೀತಿ. ಇಲ್ಲಿಯೇ ನಾನು ಸಮಕಾಲೀನರಿಗಿಂತ ಭಿನ್ನವಾದದ್ದು..’

ಇದು ಡಾ. ಚಂದ್ರಶೇಖರ ಕಂಬಾರರು ಹೇಳಿದ ಮಾತು. ಅಪ್ಪಟ ದೇಸಿ ಪ್ರಜ್ಞೆಯ ಬಹುಮುಖ ಪ್ರತಿಭೆ ಅವರು. ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಹಾಡುಗಾರ, ಜಾನಪದ ತಜ್ಞ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಆಡಳಿತಗಾರ, ಅಧ್ಯಾಪಕ ಎಲ್ಲವೂ.

ಕನ್ನಡಕ್ಕೆ ಎಂಟನೇ ಜ್ಞಾನಪೀಠ ಗೌರವ ತಂದುಕೊಟ್ಟವರು ಕಂಬಾರರು. ಅವರು ಕಾವ್ಯವನ್ನು ಪಳಗಿಸಲೂ ಕಾರಣವೊಂದಿದೆಯಂತೆ. ಅವರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆ ಓದಿದ್ದರಂತೆ. ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅಧ್ಯಕ್ಷತೆ ವಹಿಸಿದ್ದ ಖ್ಯಾತ ಕವಿಯೊಬ್ಬರು ಮಾತ್ರ ‘ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ’ ಎಂದು ಕುಹಕವಾಡಿದ್ದರಂತೆ. ಅದು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು. ಅಂದೇ ಕಾವ್ಯ ಕೃಷಿಗೆ ತೊಡಗಿದ ಕಂಬಾರರು ನಂತರ ಫಸಲು ತೆಗೆಯುತ್ತಲೇ ಹೋದರು. ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆ ರೂಢಿಸಿಕೊಂಡರು. ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಅವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಅರಸಿ ಬಂತು, ಜ್ಞಾನಪೀಠಕ್ಕೂ ಭಾಜನರಾದರು. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಕಂಬಾರರು ಜನಿಸಿದ್ದು 1937ರ ಜ. 2ರಂದು ಬೆಳಗಾವಿ ಜಿಲ್ಲೆ ಘೊಡಿಗೇರಿಯಲ್ಲಿ. ತಂದೆ ಬಸವಣ್ಣೆಪ್ಪ ಕಂಬಾರ, ತಾಯಿ ಚೆನ್ನಮ್ಮ. ಗೋಕಾಕದ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ, ಕರ್ನಾಟಕ ವಿವಿಯಿಂದ ಎಂ.ಎ. ಪದವಿ ಹಾಗೂ ಪಿಎಚ್.ಡಿ. ಪಡೆದಿದ್ದಾರೆ.

ಸಿನಿಮಾರಂಗ: ಕಂಬಾರರು ತಮ್ಮ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದರು. ಕರಿಮಾಯಿ, ಸಂಗೀತಾ, ಕಾಡುಕುದುರೆ, ಸಿಂಗಾರೆವ್ವ ಮತ್ತು ಅರಮನೆ ಇವುಗಳಲ್ಲಿ ಪ್ರಮುಖವಾದುವು. ತಮ್ಮ ಸಿನಿಮಾಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಇವರ ಸಂಗೀತ ನಿರ್ದೇಶನದ ‘ಕಾಡು ಕುದರಿ ಓಡಿಬಂದಿತ್ತಾ..’ ಹಾಡಿಗಾಗಿ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯಚಿತ್ರಗಳನ್ನು ನಿರ್ವಿುಸಿರುವ ಕಂಬಾರರು ಜಾನಪದ ಶೈಲಿಯ ಹಾಡುಗಳಿಂದ ಜನಪ್ರಿಯರು.

ಹೇಳತೇನ ಕೇಳ, ಬೆಳ್ಳಿಮೀನು ಮೊದಲಾದ 10 ಕವನ ಸಂಕಲನ, ಜೋಕುಮಾರ ಸ್ವಾಮಿ, ಸಂಗ್ಯಾ-ಬಾಳ್ಯಾ, ಸಿರಿಸಂಪಿಗೆ, ಹರಕೆಯ ಕುರಿ, ಶಿವರಾತ್ರಿ ಮೊದಲಾದ 25 ನಾಟಕಗಳು, ಚಕೋರಿ ಮಹಾಕಾವ್ಯ, ಕರಿಮಾಯಿ, ಜಿಕೆ ಮಾಸ್ತರ ಪ್ರಣಯ ಪ್ರಸಂಗ, ಶಿಖರ ಸೂರ್ಯ, ಶಿವನ ಡಂಗುರ ಮುಂತಾದ 6 ಕಾದಂಬರಿ ಅಲ್ಲದೆ 17 ಗದ್ಯ ಸಂಪಾದನೆಗಳು, ಸಂಗ್ರಹಗಳು, ಪ್ರಬಂಧ ಸಂಕಲನಗಳು, ಸಂಶೋಧನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಿರಿಸಂಪಿಗೆ ಅವರ ಅಭಿನಂದನಾ ಗ್ರಂಥ.

ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕಂಬಾರರು ಅತ್ಯಂತ ಮಹತ್ವದ ಸಾಹಿತಿ ಮತ್ತು ಚಿಂತಕ. ಜ್ಞಾನಪೀಠ ಪುರಸ್ಕೃತ ಸಾಹಿತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಭಿನಂದನೆ ಸಲ್ಲಿಸುತ್ತದೆ.

| ಉಮಾಶ್ರೀ ಸಚಿವೆ

ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಮುನ್ನೋಟ ಹೊಂದಿರುವ ಅವರು ಭಾರತೀಯ ಸಾಹಿತ್ಯ ವಲಯವನ್ನು ಸಮರ್ಥವಾಗಿ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ದಶಕಗಳ ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿದೆ.

| ನರಹಳ್ಳಿ ಬಾಲಸುಬ್ರಹ್ಮಣ್ಯ ವಿಮರ್ಶಕ

ಕಂಬಾರರು ರಾಷ್ಟ್ರಮಟ್ಟದ ಸಾಹಿತ್ಯ-ಸಾಂಸ್ಕೃತಿಕ ವಲಯದ ವಿದ್ಯಮಾನಗಳನ್ನು ಹತ್ತಿರದಿಂದ ಕಂಡವರು. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿ ಕನ್ನಡದ ಕಂಪನ್ನು ದೇಶದ ರಾಜಧಾನಿಗೆ ಬಿತ್ತಲು ಅಣಿಯಾಗಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಹಾಗೂ ನಾಡಿನ ಜನತೆಯ ಪರವಾಗಿ ಅಭಿನಂದನೆ.

| ಬಿ.ಎಸ್ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆ ನೀಡುವ ಅವಕಾಶ ಕಂಬಾರರಿಗೆ ಸಿಕ್ಕಿರುವುದು ಸಂತಸದಾಯಕ. ಅವರು ಕನ್ನಡ ಸಾಹಿತ್ಯ ಲೋಕವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತಾರೆ ಎನ್ನುವ ಭರವಸೆ ಇದೆ.

| ಚಂದ್ರಶೇಖರ ಪಾಟೀಲ್ ಸಾಹಿತಿ

ಅರ್ಹ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ, ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಕಂಬಾರರು ಹೊಂದಿದ್ದಾರೆ.

| ಚೆನ್ನವೀರ ಕಣವಿ ಸಾಹಿತಿ

Leave a Reply

Your email address will not be published. Required fields are marked *