ರೈತರಿಂದ ಇಂದು ಮನವಿ ಸಲ್ಲಿಕೆ

ಸಿಂದಗಿ: ಗುತ್ತಿ ಬಸವಣ್ಣ ಕಾಲವೆಯ ಜಾಕ್‌ವೆಲ್‌ನಲ್ಲಿ ಕನಿಷ್ಟ ಮೂರು ವಿದ್ಯುತ್ ಯಂತ್ರಗಳಿಗೆ ಚಾಲನೆ ನೀಡಿ ಕಾಲುವೆ ಆಶ್ರಿತ ರೈತರ ಜಮೀನುಗಳಿಗೆ ನೀರು ಒದಗಿಸುವಂತೆ ಆಗ್ರಹಿಸಿ ರೈತರೊಂದಿಗೆ ಜು.19ರಂದು ಬೆಳಗ್ಗೆ ಸಿಂದಗಿ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಲಾಗುತ್ತಿದೆ ಎಂದು ಮುಖಂಡ ಚಂದ್ರಶೇಖರ ದೇವರಡ್ಡಿ ತಿಳಿಸಿದ್ದಾರೆ.
ಸುರಪುರ ತಾಲೂಕಿನ ಕೆಂಭಾವಿ ಬಳಿಯ ಗುತ್ತಿ ಬಸವಣ್ಣ ಏತ ನೀರಾವರಿ ಜಾಕ್‌ವೆಲ್‌ನಲ್ಲಿ ಮೂರು ಮೋಟರ್ ಬದಲಾಗಿ ಕೇವಲ ಒಂದು ವಿದ್ಯುತ್ ಮೋಟರ್ ಮೂಲಕ ನೀರು ಹರಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಬರದಿಂದ ಕೆಂಗೆಟ್ಟ ರೈತರ ಜಮೀನಿಗೆ ಇದೇ ಕಾಲುವೆ ಮೂಲಕ ನೀರು ಹರಿಸದ ಅಧಿಕಾರಿಗಳು ಕಾಲುವೆ ದುರಸ್ತಿ, ಸಭೆ, ಸರ್ಕಾರದ ನಿರ್ದೇಶನಗಳ ನೆಪವೊಡ್ಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಜು.20ರಂದು ಆಲಮಟ್ಟಿ ಹೊರತಾಗಿ ಬೆಂಗಳೂರಿನಲ್ಲಿ ಯುಕೆಪಿ ಸಲಹಾ ಸಮಿತಿ ಸಭೆ ಕರೆದಿರುವುದನ್ನು ಪ್ರಶ್ನಿಸಿರುವ ಅವರು, ಎಲ್ಲಿ ರೈತರು ಆಲಮಟ್ಟಿಗೆ ಬಂದು ಗೊಂದಲ ಸೃಷ್ಟಿ ಮಾಡುವರೋ ಎಂದು ಹೆದರಿರುವ ಅಧಿಕಾರಿಗಳು ಸಭೆ ನೆಪದಲ್ಲಿ ರಾಜಧಾನಿಗೆ ಓಡುವ ತಂತ್ರ ಮಾಡಿದ್ದರೂ ರೈತರೊಂದಿಗೆ ಸಭೆಗೆ ಹೋಗಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸುರಪುರ, ಸಿಂದಗಿ, ಇಂಡಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *