ಸತ್ಯ ಹೇಳಿದರೆ ರಾಜಕಾರಣದಲ್ಲಿ ಹೆಚ್ಚು ದಿನ ಉಳಿಯಬಹುದು

ಕಳಸ: ಸತ್ಯ ಹೇಳುವವರು ಮತ್ತು ಮುಗ್ಧ ಮನಸ್ಸಿನವರು ರಾಜಕಾರಣದಲ್ಲಿ ಹೆಚ್ಚು ದಿನ ಉಳಿಯುತ್ತಾರೆ ಎಂದು ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಮಹಾಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೊರನಾಡು ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ರಾಜಕೀಯ ಜೀವನದಲ್ಲಿ ಯಾರಿಗೂ, ಎಂದಿಗೂ ಅಹಂಕಾರ ಬರಬಾರದು. ಒಂದು ವೇಳೆ ಅಹಂನಿಂದ ಜನರ ಹತ್ತಿರ ಹೋದರೆ ಕೆಳಗೆ ಇಳಿಸುತ್ತಾರೆ. ತಲೆ ತಗ್ಗಿಸಿ ಹೋದರೆ ಜನ ನಮ್ಮನ್ನು ಎತ್ತರಕ್ಕೆ ಏರಿಸುತ್ತಾರೆ ಎಂದು ಹೇಳಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಬದುಕಿಗಾಗಿ ರೈತರು ಸಾಲ ಮಾಡಿ ಆ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭ ಧಾರ್ವಿುಕ ಕ್ಷೇತ್ರಗಳು ಕೋಟ್ಯಂತರ ಹಣ ವಿನಿಯೋಗ ಮಾಡುವ ಮೂಲಕ ಸರ್ಕಾರದ ಹೊರೆ ಕಡಿಮೆ ಮಾಡುತ್ತಿದ್ದಾರೆ. ಇಂತಹ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಮೂಲ ಸೌಲಭ್ಯ ನೀಡಲು ಮುಂದಾದರೆ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಸಲು ಸಾಧ್ಯ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಹೊರನಾಡು ಹೆಬ್ಬಾಳೆ ಮುಳುಗು ಸೇತುವೆ ಸೇತುವೆ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದೇನೆ. ಅಲ್ಲದೆ ಕಳಸ ತಾಲೂಕು ಕೇಂದ್ರವಾದ್ದರಿಂದ ಅಲ್ಲಿಗೆ ಬರುವ ಅಧಿಕಾರಿಗಳಿಗೆ ವಸತಿಗಾಗಿ ಕುದುರೆಮುಖದಲ್ಲಿರುವ ವಸತಿಗೃಹಗಳನ್ನು ಮೀಸಲಿಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಸರಳ ಜೀವನ, ಸರಳ ವಿವಾಹ ಎಂಬ ಪರಿಣಾಮಕಾರಿ ಸಂದೇಶವನ್ನು ಸಮಾಜಕ್ಕೆ ಹೊರನಾಡು ಶ್ರೀಕ್ಷೇತ್ರ ನೀಡುತ್ತಿದೆ. ಪ್ರಸ್ತುತ ವಿವಾಹಕ್ಕಾಗಿ ದುಂದುವೆಚ್ಚ ಮಾಡಲಾಗುತ್ತಿದೆ. ಪ್ರತಿ ವರ್ಷ ಬೆಂಗಳೂರಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಕೋಟ್ಯಂತರ ಮೌಲ್ಯದ ಆಹಾರ ಹಾಳಾಗುತ್ತಿದೆ. ಈ ಹಾಳಾಗುವ ಆಹಾರದಲ್ಲಿ ಒಂದು ಸಾವಿರಕ್ಕೂ ಅಧಿಕ ಮದುವೆ ಮಾಡಬಹುದು ಎಂದರು.

ಗೃಹಸ್ಥಾಶ್ರಮ ಪ್ರವೇಶಿಸಿದ 30 ಜೋಡಿ: ಹೊರನಾಡಿನ ಅಮೃತ ಸಭಾಭವನದಲ್ಲಿ ಬೆಳಗ್ಗೆ 11.30ಕ್ಕೆ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 30 ಜೋಡಿ ವಧು-ವರರು ಗೃಹಸ್ಥಾಶ್ರಮ ಪ್ರವೇಶಿಸಿದರು. ಭೀಮೇಶ್ವರ ಜೋಷಿ ಅವರು ವಧುವಿಗೆ ಸೀರೆ, ರವಿಕೆ ಹಾಗೂ ವರನಿಗೆ ಶಾಲು, ದೋತಿ ನೀಡಿ ಹರಸಿದರು. ವಧುವರರು ದೇವರ ದರ್ಶನ ಪಡೆದು ಸಭಾಭವನ ಪ್ರವೇಶಿಸಿದರು. ಜೋಷಿ ದಂಪತಿ ವಧು-ವರರಿಗೆ ಮಂಗಳಸೂತ್ರ ವಿತರಿಸಿದರು. ವೇದ ಘೊಷದೊಂದಿಗೆ ಮಂಗಳವಾದ್ಯ ಮೊಳಗಿದಾಗ ಒಂದೇ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀ ಉದಯಶಂಕರ ಶರ್ಮ ಅವರ ಪೌರೋಹಿತ್ಯದಲ್ಲಿ ವಿವಾಹ ಸರಳವಾಗಿ ನೆರವೇರಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹೆಂಚುಗಳು, ಅನ್ನ ದಾಸೋಹ ಯೋಜನೆಯಡಿ ಆಯ್ದ ದೇವಸ್ಥಾನಗಳಿಗೆ ತಟ್ಟೆ, ಲೋಟ, ಆನಂದಜ್ಯೋತಿಯಡಿ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಪತ್ರ, ಕೃಷಿ ಸಮೃದ್ಧಿ ಯೋಜನೆಯಡಿ ಕೃಷಿ ಉಪಕರಣ ವಿತರಿಸಲಾಯಿತು.

Leave a Reply

Your email address will not be published. Required fields are marked *