ಚಂದ್ರಬಾಬು ನಾಯ್ಡು ಡರ್ಟಿಯೆಸ್ಟ್​, ಕಾಂಗ್ರೆಸ್​ ಈಡಿಯಟ್ಸ್​: ಕೆಸಿಆರ್​

ಹೈದರಾಬಾದ್​: ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅತ್ಯಂತ ಕೊಳಕು ರಾಜಕಾರಣಿ (ಡರ್ಟಿಯೆಸ್ಟ್)ಯಾದರೆ, ಕಾಂಗ್ರೆಸ್‌ನವರು ಈಡಿಯಟ್ಸ್‌ಗಳು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್​ ವಾಗ್ದಾಳಿ ನಡೆಸಿದ್ದಾರೆ.

ಹೈದರಾಬಾದ್​ನ ಪ್ರಗತಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಜೀವನದಲ್ಲೇ ಇಂಥ ಕೊಳಕು ರಾಜಕಾರಣಿಯನ್ನು ನಾನು ನೋಡಿಲ್ಲ. ಚಂದ್ರಬಾಬು ನಾಯ್ಡು ಅವರನ್ನು ಸಹಿಸಿಕೊಂಡಿರುವ ಆಂಧ್ರದ ಜನತೆಗೆ ನಾನು ಸಲ್ಯೂಟ್​ ಹೊಡೆಯುತ್ತೇನೆ. ನಾಯ್ಡು ಅವಕಾಶವಾದಿ ರಾಜಕಾರಣಿ. ಬೇಕಾದಾಗ ಬಳಸಿಕೊಂಡು ಬೇಡವಾದಾಗ ಎಸೆಯುವ ನಡೆಯಿಂದಲೇ ಅವರು ಖ್ಯಾತಿ ಗಳಿಸಿದ್ದಾರೆ ಎಂದು ಕಿಡಿಕಾರಿದರು.

ನಾಲ್ಕೂವರೆ ವರ್ಷ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿ ಇದೀಗ ಕಾಂಗ್ರೆಸ್​ನ ರಾಹುಲ್​ ಗಾಂಧಿ ಜತೆ ಕೈಜೋಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೀನಾಯ ಸೋಲು ಅನುಭವಿಸುತ್ತದೆ ಎಂದರು.

ಅಷ್ಟೇ ಅಲ್ಲದೆ, ಸ್ಥಳೀಯ ಚುನಾವಣೆಯಲ್ಲಿ ಟಿಆರ್​ಎಸ್ ಪಕ್ಷ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಮಾಡಿದ್ದ ತೆಲಂಗಾಣ ಕಾಂಗ್ರೆಸ್​ ನಾಯಕರನ್ನು ಕೆಸಿಆರ್​ ಬುದ್ಧಿಗೇಡಿಗಳು (ಈಡಿಯಟ್ಸ್) ಎಂದು ಕರೆದಿದ್ದಾರೆ. (ಏಜೆನ್ಸೀಸ್)