ನರ್ಸ್ ಹೆಝೆಲ್ ಶವ ಆಗಮನ ಇನ್ನೂ ವಿಳಂಬ

ಉಡುಪಿ: ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಆಸ್ಪತ್ರೆ ವಸತಿಗೃಹದಲ್ಲಿ ಜು.20ರಂದು ಆತ್ಮಹತ್ಯೆ ಮಾಡಿಕೊಂಡ ಶಿರ್ವ ಸಮೀಪದ ಕುತ್ಯಾರಿನ ಹೆಝಲ್ ಜೋತ್ಸ್ನಾ ಕ್ವಾಡ್ರಸ್ ಮೃತದೇಹ ಹಸ್ತಾಂತರ ವಿಳಂಬವಾಗುವ ಸಾಧ್ಯತೆ ಇದೆ.

ಸೆ.26ಕ್ಕೆ ಹುಟ್ಟೂರಿಗೆ ಶವ ಆಗಮಿಸಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಶಿರ್ವ ಚರ್ಚ್‌ನಲ್ಲಿ ಅಂತಿಮ ಸಂಸ್ಕಾರ ಸಿದ್ಧತೆ ಬಗ್ಗೆ ಸಭೆ ನಡೆಸಲಾಗಿತ್ತು. ಆದರೆ ಸಂಜೆ ವೇಳೆಗೆ ದಿನಾಂಕ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಲಭಿಸಿದೆ. 2 ತಿಂಗಳಿನಿಂದ ಸತತ ಪ್ರಯತ್ನ ನಡೆಸಲಾಗುತ್ತಿದ್ದರೂ ಸೌದಿ ಅರೇಬಿಯಾದಿಂದ ಶವ ರವಾನೆ ವಿಳಂಬವಾಗುತ್ತಿದೆ.

ಕಿರುಕುಳ ಕಾರಣ?: ಸೌದಿ ಆರೇಬಿಯಾ ರಿಯಾದ್ ಸಮೀಪದ ಅಲ್-ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ಹೆಝಲ್ ಸುಮಾರು 6 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿನ ಆಂಬುಲೆನ್ಸ್ ಚಾಲಕ ಆಕೆಗೆ ಕಿರುಕುಳ ನೀಡುತ್ತಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಈ ಬಗ್ಗೆ ಆಕೆ ಡೆತ್‌ನೋಟ್‌ನಲ್ಲಿ ವಿಷಯ ಪ್ರಸ್ತಾಪಿಸಿದ್ದು, ಚಾಲಕನನ್ನು ಬಂಧಿಸಲಾಗಿದೆ.

ಶವ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿವೆ. ಪ್ರಕರಣ ಇನ್ನೂ ಸೌದಿ ನ್ಯಾಯಾಲಯದ ಮೆಟ್ಟಿಲು ಹತ್ತಿಲ್ಲ. ಶವದ ಜತೆ ಬರುವ ದಾಖಲೆಗಳನ್ನು ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಸಾವಿನ ಸ್ಪಷ್ಟ ಚಿತ್ರಣ ಲಭಿಸದೆ ಊಹಾಪೋಹಗಳಿಗೆ ಪ್ರಾಶಸ್ತ್ಯ ನೀಡುವ ಅಗತ್ಯವಿಲ್ಲ.
|ಡಾ.ರವೀಂದ್ರನಾಥ ಶ್ಯಾನುಭೋಗ್, ಅಧ್ಯಕ್ಷ, ಮಾನವ ಹಕ್ಕು ಪ್ರತಿಷ್ಠಾನ, ಉಡುಪಿ