ಸೌದಿ ಅರೇಬಿಯಾಗೆ ಸದ್ಯಕ್ಕೆ ಶಸ್ತ್ರಾಸ್ತ್ರ ಮಾರಾಟವಿಲ್ಲ: ಜರ್ಮನಿ

ಬರ್ಲಿನ್​: ಹಿರಿಯ ಪತ್ರಕರ್ತ ಜಮಾಲ್​ ಖಶೋಗಿ ಸಾವಿನ ಕುರಿತಾದ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ಸೌದಿ ಅರೇಬಿಯಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದಿಲ್ಲ ಎಂದು ಜರ್ಮನಿಯ ಚಾನ್ಸೆಲರ್​ ಏಂಜೆಲಾ ಮಾರ್ಕೆಲ್​ ತಿಳಿಸಿದ್ದಾರೆ.

ಖಶೋಗಿ ಹತ್ಯೆಯನ್ನು ಜರ್ಮನಿ ಖಂಡಿಸುತ್ತದೆ. ಸೌದಿ ಅರೇಬಿಯಾ ಸರ್ಕಾರ ಟರ್ಕಿಯ ಇಸ್ತಾಂಬುಲ್​ನ ರಾಯಭಾರ ಕಚೇರಿಯಲ್ಲಿ ನಡೆದ ಘಟನೆಯ ಕುರಿತು ಸ್ಪಷ್ಟನೆ ನೀಡಬೇಕು. ಜತೆಗೆ ಖಶೋಗಿ ಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು. ಇನ್ನು ಪ್ರಸ್ತುತ ಸನ್ನಿವೇಶದಲ್ಲಿ ಸೌದಿ ಅರೇಬಿಯಾಗೆ ಶಸ್ತ್ರಾಸ್ತ್ರ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಮಾರ್ಕೆಲ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೌದಿ ಅರೇಬಿಯಾಗೆ ಸುಮಾರು 15 ಬಿಲಿಯನ್​ ಅಮೆರಿಕನ್​ ಡಾಲರ್​ ಮೌಲ್ಯದ ಮಿಲಿಟರಿ ವಾಹನಗಳನ್ನು ಮಾರಾಟ ಮಾಡುವ ಜರ್ಮನಿ ಸರ್ಕಾರದ ನಿರ್ಣಯದ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು.

ಪತ್ರಕರ್ತ ಖಶೋಗಿ ಅವರು ಅಕ್ಟೋಬರ್​ 2 ರಂದು ಇಸ್ತಾಂಬುಲ್​ನಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಕಚೇರಿಗೆ ತೆರಳಿದ್ದರು. ಆ ನಂತರ ಅವರು ರಾಯಭಾರ ಕಚೇರಿಯಿಂದ ಹೊರಗೆ ಬಂದಿರಲಿಲ್ಲ. ಖಶೋಗಿ ನಿಗೂಢ ನಾಪತ್ತೆ ಕುರಿತು ವಿಶ್ವದಾದ್ಯಂತ ಸಾಕಷ್ಟು ಚರ್ಚೆ ನಡೆದಿತ್ತು ಮತ್ತು ಅವರನ್ನು ಸೌದಿಯ ಯುವರಾಜ ಮೊಹಮ್ಮದ್​ ಬಿನ್​ ಸಲ್ಮಾನ್​ ಹತ್ಯೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದಂತೆ ಖಶೋಗಿ ರಾಯಭಾರ ಕಚೇರಿಯಲ್ಲಿ ಹತ್ಯೆಗಾಗಿರುವುದು ಸತ್ಯ. ರಾಯಭಾರ ಕಚೇರಿಯಲ್ಲಿ ನಡೆದ ಜಗಳ ಅವರ ಹತ್ಯೆಯಲ್ಲಿ ಕೊನೆಗೊಂಡಿತು ಎಂದು ಸೌದಿ ಸರ್ಕಾರ ತಿಳಿಸಿದೆ. ಆದರೆ, ಇದರ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ ಮತ್ತು ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. (ಏಜೆನ್ಸೀಸ್​)