ವಿಜೃಂಭಣೆಯ ಚೌಡೇಶ್ವರಿ ದೇವಿ ಬ್ರಹ್ಮರಥೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ಹಬ್ಬದ ಪ್ರಯುಕ್ತ ದೇವಿಯ ಬ್ರಹ್ಮರಥೋತ್ಸ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.

15 ದಿನಗಳ ಹಿಂದೆ ದೇವಿಯ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆತಿತ್ತು. ನಿತ್ಯವೂ ದೇವಿಗೆ ಅರ್ಚನೆಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತಿದ್ದವು. ಕಳೆದ ಮಂಗಳವಾರ ರಂಗದ ಕುಣಿತ ಪ್ರಾರಂಭಿಸಿದ್ದು, ನಿತ್ಯ ರಾತ್ರಿ ಉಯ್ಯಲೆ ಬೀದಿಯಲ್ಲಿ ರಂಗ ಕುಣಿತದ ಪ್ರದರ್ಶನ ನಡೆಯುತ್ತಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ದೇಗುಲಗಳು, ಉಯ್ಯಲೆ ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬ್ರಹ್ಮರಥೋತ್ಸವ ಜರುಗುವ ಉಯ್ಯಲೆ ಬೀದಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸುವುದರ ಜತೆಗೆ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.

ಬುಧವಾರ ಮುಂಜಾನೆಯಿಂದಲೇ ದೇವಿಯ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡು ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ಒಡವೆ-ವಸ್ತ್ರಗಳಿಂದ ಅಲಂಕರಿಸಲಾಯಿತು, ಗ್ರಾಮದ ಹೆಣ್ಣು ಮಕ್ಕಳು ಸನ್ನಿಧಿಗೆ ಆಗಮಿಸಿ ದೇವಿಯ ದರ್ಶನ ಪಡೆದರು.

ಮಧ್ಯಾಹ್ನ 1.30ರಲ್ಲಿ ಮೂಲ ದೇಗುಲದಿಂದ ಚೌಡೇಶ್ವರಿ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿತು, ಬಳಿಕ ಉತ್ಸವವು ಉಯ್ಯಲೆ ಕಂಬವನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿದ ಬಳಿಕ ಬ್ರಹ್ಮರಥದ ಮೇಲೆ ದೇವಿಯನ್ನು ಪ್ರತಿಷ್ಠಾಪಿ ರಥೋತ್ಸವಕ್ಕೆ ಮಧ್ಯಾಹ್ನ 1.58ರಲ್ಲಿ ಚಾಲನೆ ದೊರೆಯಿತು, ಸಾವಿರಾರು ಭಕ್ತರು ಜಯಘೋಷಗಳ ಜತೆ ಬ್ರಹ್ಮರಥ ಎಳೆದರು.

ಹೆಣ್ಣು ಮಕ್ಕಳು ಹಣ್ಣು-ದವನ, ಹೂವು-ಪತ್ರೆಗಳನ್ನು ರಥದ ಮೇಲೆ ಎಸೆದರು, ಭಕ್ತರು ಈಡುಗಾಯಿ ಒಡೆದರು, ಚೌಡೇಶ್ವರಿ ದೇವಿಗೆ ಮಹಾಮಂಗಳಾರತಿ ಜರುಗಿದ ಬಳಿಕ ತೀರ್ಥ-ಪ್ರಸಾದ ಜರುಗಿದ್ದು, ಭಕ್ತರಿಗೆ ಮಜ್ಜಿಗೆ ಹಾಗೂ ಪಾನಕ ವಿತರಿಸಲಾಯಿತು.

ಧರ್ಮದರ್ಶಿ ಫಣೀಶ್ ನೇತ್ರತ್ವದಲ್ಲಿ ಪ್ರಧಾನ ಅರ್ಚಕರಾದ ಅನಂತರಾಮಯ್ಯ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು, ಶಾಸಕ ಸಿ.ಎನ್.ಬಾಲಕೃಷ್ಣ, ಮುಖಂಡ ಎಚ್.ಜಿ.ರಾಮಕೃಷ್ಣ, ಜಿ ಪಂ ಮಾಜಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಮಾಜಿ ಸದಸ್ಯೆ ಕುಸುಮಾರಾಣಿ, ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ಗ್ರಾಪಂ ಅಧ್ಯಕ್ಷ ಮಹೇಶ್, ಲಲಿತ್‌ರಾಘವ್, ಹಿರೀಸಾವೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.