ಚನ್ನಗಿರೀಲಿ ಜಾನುವಾರುಗಳಿಗೆ ಮೇವಿನ ಬರ

ಚನ್ನಗಿರಿ: ಮಳೆ ಕೊರತೆಯಿಂದಾಗಿ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಎದುರಾಗಿದ್ದು, ರೈತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಳೆ ಇಲ್ಲದೆ ಕೊಳವೆಬಾವಿ, ಕೆರೆಗಳಲ್ಲಿ ನೀರು ಒಣಗಿ ಹೋಗಿದೆ. ಕುಡಿವ ನೀರಿನ ತೊಂದರೆ ಪ್ರಾರಂಭವಾಗಿದೆ. ಜಾನುವಾರುಗಳಿಗೆ ಮೇವು ಸಿಗದೆ ರೈತರು ಹಣ ನೀಡಿ ಮೇವು ಖರೀದಿಸಿ ತಂದು ಸಂಗ್ರಹಿಸುತ್ತಿದ್ದಾರೆ.

ಪಂಚಾಯಿತಿಯಿಂದ ಒಂದು ಸಾವಿರ ಅಡಿ ಆಳದಷ್ಟು ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಕೆರೆಗಳು ಒಣಗಿ ಹೋಗಿವೆ. ಕಾಕನೂರು, ದೊಡ್ಡೇರಿಕಟ್ಟೆ, ದೊಡ್ಡಬ್ಬಿಗೆರೆ, ಹರಳಿಕಟ್ಟೆ, ದೇವರಹಳ್ಳಿ ನಲ್ಲೂರು, ಚಿಕ್ಕಹುಲಿಕೆರೆ ಸೇರಿ 25ಕ್ಕೂ ಅಧಿಕ ಗ್ರಾಮಗಳ ಕೆರೆಗಳು ಸಂಪೂರ್ಣ ಬರಿದಾಗಿವೆ.

ಮುಂಗಾರು ಮಳೆ ಬಾರದೆ ರೈತರು ಬಿತ್ತನೆ ಮಾಡಿದ ಬೆಳೆಯಲ್ಲಿ ಶೇ. 70 ನಾಶವಾಗಿದೆ. ಕಡ್ಲೆ 900ರಲ್ಲಿ 600 ಹೆಕ್ಟೇರ್ ನಾಶವಾಗಿದೆ. ಹಲಸಂದೆ 750 ಹೆಕ್ಟೇರ್‌ನಲ್ಲಿ 500 ಹೆಕ್ಟೇರ್ ನಾಶವಾಗಿದೆ. ಹಿಂಗಾರಿನಲ್ಲಿ ಮೆಕ್ಕೇಜೋಳ 18ಸಾವಿರದಲ್ಲಿ 10 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ರೈತರು ನಿರೀಕ್ಷಿಸಿದ ಫಸಲು ಬಂದಿಲ್ಲ.

ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಗ್ರಾಮದ ಜಾನುವಾರುಗಳ ತೊಟ್ಟಿಗಳಲ್ಲೂ ನೀರು ಇಲ್ಲದಂತಾಗಿದೆ. ರೈತರು ಪೈಪ್‌ಲೈನ್ ಇದ್ದಕಡೆ ದನಕರು ತೆಗೆದುಕೊಂಡು ಹೋಗಿ ನೀರು ಕುಡಿಸಿಕೊಂಡು ಬರುತ್ತಿದ್ದಾರೆ. ಮುಂದಿನ ದಿನದಲ್ಲಿ ಮೇವಿನ ಸಮಸ್ಯೆ ಎದುರಾಗದಂತೆ ಮೇವು ಖರೀದಿಸುವ ಪರಿಸ್ಥಿತಿ ಉಂಟಾಗಿದೆ.

ಮನೆಯಲ್ಲಿ ಜಾನುವಾರು ಸಾಕಿಕೊಂಡು ಕುಟುಂಬ ನಿರ್ವಹಿಸಲಾಗುತ್ತಿದೆ. ಮೂಕಪ್ರಾಣಿಗಳು ಹಸಿವು ತಡೆಯಲಾರದೇ ಎಲ್ಲಿ ಹೋದರೂ ಮೇವು ಸಿಗುತ್ತಿಲ್ಲ. ಏಳು ಸಾವಿರ ರೂಪಾಯಿ ನೀಡಿ ಬಸವಾಪಟ್ಟಣ, ಕಬ್ಬಳ ಗ್ರಾಮದಿಂದ ಒಂದು ಲೋಡ್ ಖರೀದಿಸಲಾಗಿದೆ ಎನ್ನುತ್ತಾರೆ ರೈತ ಪ್ರಕಾಶ್.

ಬರಪಟ್ಟಿಗೆ ತಾಲೂಕು ಸೇರಿದೆ. ಮಳೆ ಇಲ್ಲದೆ ಮುಂಗಾರು ಬೆಳೆ ರೈತರಿಗೆ ಲಾಭ ನೀಡಿಲ್ಲ. ಆದರೆ, ಜಾನುವಾರುಗಳಿಗೆ ನೀರು, ಮೇವು ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದರು.