ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಮತ್ತಿಗೋಡು ಕಿಲಾಡಿಗಳು ಸಜ್ಜು

ಚನ್ನಗಿರಿ: ತಾಲೂಕಿನ ಕುಕ್ಕವಾಡ ಉಬ್ರಾಣಿ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಎಂಟು ತಿಂಗಳಿಂದ ಬೆಳೆನಾಶದ ಜತೆಗೆ ಗ್ರಾಮಸ್ಥರನ್ನು ಭೀತಿ ಹುಟ್ಟಿಸಿರುವ ಕಾಡಾನೆ ಸೆರೆಗೆ ಇಲಾಖೆ ಮುಹೂರ್ತ ನಿಗದಿ ಮಾಡಿದ್ದು, ಮೈಸೂರಿನ ನಾಗರಹೊಳೆ ಮತ್ತಿಗೋಡು ಆನೆಕ್ಯಾಂಪ್‌ನ ಐದು ಸಾಕಾನೆಗಳ ತಂಡ ಸಜ್ಜಾಗಿದೆ.

ಆನೆಗಳಾದ ಅಭಿಮನ್ಯು, ಕೃಷ್ಣ, ಧನಂಜಯ, ಹರ್ಷ, ಅಜೇಯ ತಾಲೂಕಿನ ಗಂಡುಗನ ಹಂಕಲು ಗ್ರಾಮದ ಬಳಿ ಬೀಡುಬಿಟ್ಟಿವೆ. ಶಿವಮೊಗ್ಗ ಡಿಎಫ್‌ಒ ಚೆಲುವರಾಜ್ ನೇತೃತ್ವ ತಂಡ ಕಾರ್ಯಚರಣೆ ನಡೆಸಲಿದೆ. ಸಿಸಿಎಫ್ ಬಾಲಚಂದ್ರ, ಎಸಿಎಫ್ ಸುಬ್ರಮಣ್ಯ ಭಟ್, ಚನ್ನಗಿರಿ ಆರ್‌ಎಫ್‌ಒ ಎಸ್.ಒ. ದಿನೇಶ್, ಅಜ್ಜಂಪುರ ಆರ್‌ಎಫ್‌ಒ ಮಂಜುನಾಥ್ ಸೇರಿ ನೂರಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಗಂಡುಗನಹಂಕಲು ಗ್ರಾಮದ ಅರಣ್ಯದಿಂದ ಕಾರ್ಯಚರಣೆ ಪ್ರಾರಂಭವಾಗಲಿದೆ. ಶಾರ್ಫ್ ಶೂಟರ್ ಅಕ್ರಂ, ವೆಂಕಟೇಶ್, ತಜ್ಞ ಡಾ. ಮುಜೀಬ್ ಸೇರಿ ಆನೆ ಟ್ರ್ಯಾಕರ್, 30 ಮಾವುತರು, ಕಾವಾಡಿಗರು ಬಂದಿದ್ದಾರೆ.

ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್.ಒ. ದಿನೇಶ್ ಮಾತನಾಡಿ, ಉಬ್ರಾಣಿ ಅರಣ್ಯದಲ್ಲಿ 8ಕ್ಕೂ ಅಧಿಕ ಕಾಡಾನೆಗಳು ಇರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಲ್ಲೊಂದು ಕಾಡಾನೆ ತಾಲೂಕಿನ ಗಿರಿಯಪುರ, ಉಬ್ರಾಣಿ, ಕಗ್ಗಿ, ಮುಗಳಿಹಳ್ಳಿ, ಜೋಳದಾಳ್, ಹೊಸೂರು, ಅಮ್ಮನಗುಡ್ಡ ಸುತ್ತಲಿನ ಗ್ರಾಮದ ಅಡಕೆ, ಬಾಳೆ, ಮೆಕ್ಕೆಜೋಳದ ಬೆಳೆ ನಾಶಮಾಡಿದೆ. ಪುಂಡಾನೆ ಸೆರೆಗೆ ಅನುಮತಿ ಕೋರಿ ಇಲಾಖೆಗೆ ಜುಲೈನಲ್ಲಿ ಪತ್ರ ಬರೆಯಲಾಗಿತ್ತು. ಇಲಾಖೆ ಅನುಮತಿ ಸಿಕ್ಕಿದರೂ ತಾಂತ್ರಿಕ ತೊಂದರೆಯಿಂದ ಕಾರ್ಯಾಚರಣೆ ಮುಂದುಡಲಾಗಿತ್ತು ಎಂದು ಹೇಳಿದರು.

ಡಿಎಫ್‌ಒ ಚೆಲುವರಾಜ್ ಮಾತನಾಡಿ, ಕಾಡಾನೆಗಳ ಹಿಡಿಯಲು ಇಲಾಖೆಯಿಂದ ಸಾಕಾನೆ ಕರೆಸಲಾಗಿದೆ. ರಂಗಯ್ಯನಗಿರಿಯಲ್ಲಿ ಕಾಡಾನೆಗಳು ಇರುವುದು ತಿಳಿದು ಬಂದಿದೆ. ಸುತ್ತಲಿನ ಜನರು, ದನಗಾಹಿಗಳು ಕಾರ್ಯಾಚರಣೆ ಮುಗಿವ ತನಕ ಕಾಡಿನ ಸರಹದ್ದಿನ ಒಳಗೆ ಹೋಗಬಾರದು ಎಂದು ತಿಳಿಸಿದರು.