ಬಿಎಸ್‌ಎನ್‌ಎಲ್ ನೌಕರರ ಪ್ರತಿಭಟನೆ

ಚನ್ನಗಿರಿ: ಆಲ್ ಯೂನಿಯನ್ಸ್ ಮತ್ತು ಅಸೋಸಿಯೇಷನ್ಸ್ ಆಫ್ ಬಿಎಸ್‌ಎನ್‌ಎಲ್ ಕರ್ನಾಟಕ ವಲಯ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರ ವ್ಯಾಪಿ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಚನ್ನಗಿರಿಯ ಬಿಎಸ್‌ಎನ್‌ಎಲ್ ಇಲಾಖೆ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಸೋಮವಾರ ಮುಷ್ಕರ ಪ್ರಾರಂಭಿಸಿದರು.

ಇಲಾಖೆಯ ಜಿಲ್ಲಾ ವಿಭಾಗೀಯ ಅಭಿಯಂತರ ಎಚ್.ಆರ್.ಜಯಪ್ಪ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿ, ಇಲಾಖೆ ಕೋರಿಕೆಯಂತೆ 4ಜಿ ಸ್ಪೆಕ್ಟ್ರಮ್ ವಿತರಿಸಬೇಕು. ಬಿಎಸ್‌ಎನ್‌ಎಲ್ ಒಡೆತನದ ಭೂಮಿ ನಿರ್ವಹಣೆ ನೀತಿಗೆ ಅನುಮೋದನೆ ನೀಡಬೇಕು. ಸಂಸ್ಥೆಯ ಆರ್ಥಿಕ ಸುಭದ್ರತೆ ಕಾಪಾಡಬೇಕು. ಬ್ಯಾಂಕುಗಳಿಂದ ಸಾಲ ಪಡೆಯಲು ಅನುಮತಿ ನೀಡಬೇಕು. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದರು.

ಬಿಎಸ್‌ಎನ್‌ಎಲ್‌ಗೆ ಸೇರಿದ ಟವರ್‌ಗಳ ನಿರ್ವಹಣೆಯನ್ನು ಇಲಾಖೆ ಖಾಸಗಿಯವರಿಗೆ ನೀಡುವ ತಿರ್ಮಾನ ಕೈಬಿಡಬೇಕು. ಮೂರನೇ ವೇತನ ಜಾರಿ ಮಾಡಬೇಕು. ಸರ್ಕಾರಿ ಆದೇಶದಂತೆ ಮೂಲ ವೇತನದ ಮೇಲೆ ಪಿಂಚಣಿ ನೀಡಬೇಕು ಎಂದರು.

ಆಲ್ ಯೂನಿಯನ್ಸ್ ಮತ್ತು ಅಸೋಸಿಯೇಷನ್ಸ್ ಆಫ್ ಬಿಎಸ್‌ಎನ್‌ಎಲ್ ಕರ್ನಾಟಕ ವಲಯದ ಉಪಾಧ್ಯಕ್ಷ ಬಿ.ಜೆ.ಚಂದ್ರಪ್ಪ, ಶಾಖೆ ಕಾರ್ಯದರ್ಶಿ ಎಚ್.ಬಿ.ಚಿತ್ರಲಿಂಗಪ್ಪ, ಪಾಂಡುರಂಗ ಬೆಂಗ್ರೆ, ಶೇಷಗಿರಿರಾವ್, ಪರಮೇಶ್ವರ್, ಪದ್ಮಾವತಿ ಪ್ರತಿಭಟನೆಯಲ್ಲಿದ್ದರು.