ಕಾವೇರಿ ನದಿ ನೀರಿನ ಪ್ರಮಾಣ ಪರಿಶೀಲನೆ

ನವದೆಹಲಿಯ ಸೆಂಟ್ರಲ್ ವಾಟರ್ ಕಮಿಷನ್ ತಂಡದಿಂದ ಮಾಹಿತಿ ಸಂಗ್ರಹ
ಕೊಳ್ಳೇಗಾಲ: ತಾಲೂಕಿನ ಮೂಲಕ ತಮಿಳುನಾಡಿಗೆ ಹರಿಯುವ ಕಾವೇರಿ ನದಿಯ ನೀರಿನ ಮಟ್ಟವನ್ನು ದೆಹಲಿಯ ಸೆಂಟ್ರಲ್ ವಾಟರ್ ಕಮಿಷನ್(ಸಿಡಬ್ಲ್ಯೂಸಿ) ತಂಡ ಶುಕ್ರವಾರ ಪರಿಶೀಲಿಸಿತು.
ಗುರುವಾರ ಸಂಜೆ ತಾಲೂಕಿನ ದಾಸನಪುರ, ಸರಗೂರು, ಧನಗೆರೆ ಭಾಗದಲ್ಲಿ ಹರಿಯುವ ಕಾವೇರಿ ನದಿ ನೀರಿನ ಮಟ್ಟ ಹಾಗೂ ನದಿ ನೀರಿನ ಅಳತೆ ತೋರಿಸುವ ಗೇಜ್ ಮೀಟರ್‌ಗಳನ್ನು ಸೆಂಟ್ರಲ್ ವಾಟರ್ ಕಮಿಷನ್ ಸದಸ್ಯ ಯೋಗೇಂದ್ರ ಕುಮಾರ್ ಶರ್ಮ ನೇತೃತ್ವದ ತಂಡ ಪರಿಶೀಲಿಸಿತು. ಶುಕ್ರವಾರ ತಾಲೂಕಿನ ಹೊಗೇನಕಲ್ ಬಳಿಯ ಬಿಳಿಗುಂಡ್ಲು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಎಸ್.ಶ್ರೀಕಂಠಪ್ರಸಾದ್, ಕಬಿನಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಲ್.ರಘು, ಎಇಇ ಪ್ರಶಾಂತ್ ಸೇರಿ ಇತರೆ ಇಂಜಿನಿಯರ್‌ಗಳ ತಂಡ ದೆಹಲಿ ತಂಡದೊಂದಿಗೆ ತೆರಳಿ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ವಾಸ್ತವ ಮಾಹಿತಿಯನ್ನು ತಿಳಿಸಿದ್ದಾರೆ.
ದೆಹಲಿ ತಂಡ ಅ.25 ರಂದು ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದು, ಅ.29ರವರೆಗೆ ಕರ್ನಾಟಕ- ತಮಿಳುನಾಡು ರಾಜ್ಯದ ವಿವಿಧೆೆಡೆ ಕಾವೇರಿ ನದಿ ಹರಿಯುತ್ತಿರುವ ನೀರಿನ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಲಿದೆ ಎನ್ನಲಾಗಿದೆ. ಆದರೆ ಕಾವೇರಿ ನದಿ ನೀರಿನ ಮಟ್ಟ ಪರಿಶೀಲಿಸಲು ಕಾರಣ ಏನೆಂದು ತಿಳಿದು ಬಂದಿಲ್ಲ.