ಸಿನಿಮಾ

ಪುಸ್ತಕ ಓದುಗರನ್ನು ಮೊಬೈಲ್ ಸೆಳೆದು ಕೊಂಡಿದೆ

ಚಾಮರಾಜನಗರ: ಪುಸ್ತಕಗಳು ಜ್ಞಾನ, ಸಂಸ್ಕೃತಿ ಮತ್ತು ಮನರಂಜನೆಯ ಪ್ರಮುಖ ಮೂಲವಾಗಿದೆ. ಅವು ಪ್ರಪಂಚದ ಮತ್ತು ನಮ್ಮ ಬಗ್ಗೆ ನಮ್ಮ ತಿಳುವಳಿಕೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಓದುವುದು ಒಂದು ಒಳ್ಳೆಯ ಹವ್ಯಾಸವಾಗಿತ್ತು. ಆದರೆ ಇಂದು ಪುಸ್ತಕ ಓದುಗರನ್ನು ಮೊಬೈಲ್ ಸೆಳೆದು ಕೊಂಡಿದೆ ಎಂದು ಹಿರಿಯ ಸಾಹಿತಿ ಕೆ.ವೆಂಕಟರಾಜು ಬೇಸರ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ರಂಗವಾಹಿನಿ ಸಂಸ್ಥೆ ಸಹಯೋಗದೊಂದಿಗೆ ಸೋಮವಾರ ಯೋಜಿಸಿದ್ದ ಪುಸ್ತಕ ಓದು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಯುವ ಜನರಲ್ಲಿ ಓದಿನ ಕುತೂಹಲ ಇಲ್ಲವಾಗಿದೆ. ಕುತೂಹಲ ಇಲ್ಲದಾಗ ಓದುವ ಸ್ವಾರಸ್ಯ ಕಳೆದು ಹೋಗುತ್ತದೆ. ಮನೆಯಲ್ಲಿ ಕೂಡ ತಂದೆ ತಾಯಿಯಾದವರಲ್ಲಿ ಓದುವ ಮನೋಭಾವ ಇಲ್ಲದಾಗಿದೆ. ಅವರನ್ನೇ ನೋಡಿ ಬೆಳೆದ ಮಕ್ಕಳು ಕೂಡ ಓದಲು ಆಸಕ್ತಿ ತೋರಲಾರರು. ಪುಸ್ತಕಗಳ ಸಾಂಗತ್ಯ ನಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ. ನೀವು ಸ್ವಚ್ಚ ಮನಸ್ಸಿನಿಂದ ಪುಸ್ತಕವನ್ನು ಓದಲು ಪ್ರಾರಂಭಿಸಿದಾಗ ಪುಸ್ತಕದಲ್ಲಿನ ಮಾಹಿತಿಯು ಮನಸ್ಸಿನಲ್ಲಿ ಆಳಕ್ಕೆ ಇಳಿಯುತ್ತದೆ. ಇದರಿಂದ ಪುಸ್ತಕ ಓದುವ ಹವ್ಯಾಸ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿದಿನ ಪುಸ್ತಕಗಳನ್ನು ಓದಲು ಪ್ರಯತ್ನಿಸಿ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಸಾಹಿತಿ ಮಂಜುನಾಥ ಪ್ರಸನ್ನ ಮಾತನಾಡಿ, ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಸಮಯ ಹಾಳು ಮಾಡುವ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳು ಜ್ಞಾನದ ಸಂಕೇತ ಎಂದು ಹೇಳಿದರು.

ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನದ ಬಾಗಿಲು ತೆರೆದಂತೆ. ಜ್ಞಾನವೃದ್ಧಿಯಾದರೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉದ್ಯೋಗದ ಬಾಗಿಲು ತೆರೆದಂತಾಗುತ್ತದೆ. ಮೊಬೈಲ್ ತಲೆ ತಗ್ಗಿಸಿದರೆ, ಪುಸ್ತಕ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. ಆದುದರಿಂದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.


ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎ.ಎಂ. ಶಿವಸ್ವಾಮಿ ಮಾತನಾಡಿ, ಓದಿನಿಂದ ಅಂಬೇಡ್ಕರ್ ಜ್ಞಾನಿಯಾದರು. ಓದನ್ನು ಅಳವಡಿಸಿಕೊಂಡ ಗಾಂಧೀಜಿಯವರು ಮಹಾತ್ಮರೆನಿಸಿಕೊಂಡರು. ಪುಸ್ತಕಗಳು ಸ್ನೇಹಿತರಿದ್ದಂತೆ ಪುಸ್ತಕ ಓದು ಬಹಳ ಮುಖ್ಯ ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನ ಗ್ರಂಥಾಲಯಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಚಂದ್ರಮ್ಮ ವಹಿಸಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲೋಕೇಶ್, ಸುರೇಶ್ ಗ್ರಂಥಾಲಯ ಅಧಿಕಾರಿ ಜಯಕುಮಾರ್, ಹರ್ಷಿತಾ, ಜ್ಯೋತಿ ಭಾಗವಹಿಸಿದ್ದರು.

Latest Posts

ಲೈಫ್‌ಸ್ಟೈಲ್