ಸಿನಿಮಾ

ಡೀನ್ ವಜಾಕ್ಕೆ ಹೆಚ್ಚಿದ ಆಕ್ರೋಶ

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್ ಡಾ.ಸಂಜೀವ್ ಅವರನ್ನು ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ಮಹಾ ಒಕ್ಕೂಟದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಪ್ರಾರಂಭವಾದ ಪ್ರತಿಭಟನೆ, ಪ್ರವಾಸಿ ಮಂದಿರ, ಸುಲ್ತಾನ್ ಷರೀಫ್ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿಯಲ್ಲಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿತು. ಬಳಿಕ ಜಿಲ್ಲಾಡಳಿತ ಭವನ ತಲುಪಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಕಚೇರಿ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿ, ಸಿಮ್ಸ್ ನಿರ್ದೇಶಕ ಹಾಗೂ ಡೀನ್ ಡಾ.ಸಂಜೀವ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಡೀನ್ ಸಂಜೀವ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಡಾ.ಮಾರುತಿ ಅವರ ಮೇಲಿನ ದೂರು ವಾಪಸ್ ಪಡೆಯಬೇಕು. ಸಂಜೀವ್ ಜತೆ ಶಾಮೀಲಾಗಿರುವ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಸೇರಿದಂತೆ ಒಟ್ಟು 8 ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್ ಮಾತನಾಡಿ, 6 ತಿಂಗಳಿನಿಂದ ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡದೆ, ಮಹಿಳೆಯರಿಗೆ ಡಾ.ಸಂಜೀವ್ ಸಿಮ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಸಂವಿಧಾನದಡಿಯಲ್ಲಿ ಕೆಲಸ ಮಾಡುವ ಇವರು ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಿತ್ತು. ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನಿಂದಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಆರೋಪಿಸಿದರು.

ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಡಾ.ಸಂಜೀವ್ ವಿರುದ್ಧ ಕ್ರಮ ಕೈಗೊಳ್ಳಲು ಒಂದು ವಾರ ಕಾಲಾವಕಾಶ ಕೊಡುತ್ತೇವೆ. ಇಲ್ಲವೇ, ಜಿಲ್ಲೆಯನ್ನು ಬಂದ್ ಮಾಡುವ ಮೂಲಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಮಹೇಶ್ ಕುದರ್ ಮಾತನಾಡಿ, ಮಾತಿನ ಸ್ಥಿಮಿತ ಕಳೆದುಕೊಂಡಿರುವ ಡಾ.ಸಂಜೀವ್ ಅವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಬ.ಮ.ಕೃಷ್ಣಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹ್ಮದ್, ನಗರಸಭಾ ಸದಸ್ಯ ಮಹೇಶ್, ಉಮೇಶ್ ಕುದರ್, ಕೆ.ಎಂ.ನಾಗರಾಜ್, ಶಿವಣ್ಣ, ಬಸವಣ,್ಣ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ನಲ್ಲೂರು ಸೋಮೇಶ್, ಆರ್.ಮಹದೇವ್, ನಲ್ಲೂರು ಮಹದೇವಸ್ವಾಮಿ, ಪ್ರಶಾಂತ್, ಅಯ್ಯನಪುರ ಶಿವಕುಮಾರ್, ಜಿ.ಎಂ.ಗಾಡ್ಕರ್, ಸಿ.ಎಂ.ನರಸಿಂಹಮೂರ್ತಿ, ವಕೀಲ ಪ್ರಸನ್ನ ಕುಮಾರ್, ಪುಟ್ಟಸ್ವಾಮಿ, ದೊಡ್ಡಿಂದವಾಡಿ ಸಿದ್ದರಾಜು, ಅಣಗಳ್ಳಿ ಬಸವರಾಜ್, ಸುಭಾಷ್ ಮಾಡ್ರಳ್ಳಿ, ಅಂಬರೀಶ್ ಹಾಗೂ ಇತರರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡುತ್ತಿಲ್ಲ ಎಂಬ ಸಮಸ್ಯೆ ಬಗ್ಗೆ ಈಗಾಗಲೇ ಮಾತನಾಡಿ ಕನಿಷ್ಠ ವೇತನ ನೀಡಲು ಏಜೆನ್ಸಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಿಮ್ಸ್ ಡೀನ್ ಡಾ.ಸಂಜೀವ್ ವಿರುದ್ಧದ ದೂರಿನ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಈಗಾಗಲೇ ಈ ಕುರಿತು ತನಿಖೆ ಕೈಗೊಂಡಿದೆ ಎಂದರು.

Latest Posts

ಲೈಫ್‌ಸ್ಟೈಲ್