More

  ಎಸ್ಟಿ ಸಮುದಾಯ ಬಾಲರಾಜ್ ಗೆಲುವಿಗೆ ಶ್ರಮಿಸೋಣ

  ಚಾಮರಾಜನಗರ: ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಎಸ್ಟಿ ಸಮುದಾಯ ಈ ಬಾರಿಯ ಚುನಾವಣೆಯಲ್ಲಿ ಬಾಲರಾಜ್ ಅವರ ಗೆಲುವಿಗೆ ಶ್ರಮಿಸೋಣ ಎಂದು ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಕರೆ ನೀಡಿದರು.

  ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಪರಿಶಿಷ್ಟ ಪಂಗಡದ ಮುನ್ನಡೆ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

  ದೇಶದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹಿಂದುಗಳು 60-70 ವರ್ಷಗಳ ಕಾಲ ಹೋರಾಟ ಮಾಡಿಕೊಂಡು ಬರುತ್ತಿದ್ದೆವು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನರೇಂದ್ರಮೋದಿ ಅವರು ಬರಬೇಕಾಯಿತು. ಅದಲ್ಲದೇ ಮೋದಿ ಅವರು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರನ್ನು ಇಟ್ಟಿದ್ದಾರೆ. ದೇಶಕ್ಕಾಗಿ, ಮೋದಿ ಅವರಿಗಾಗಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕೈ ಬಲಪಡಿಸುವ ದೃಷ್ಟಿಯಿಂದ ಎಸ್ಟಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

  ಎಸ್ಟಿ ಸಮುದಾಯದ ಜನರು ಸುಮಾರು 30 ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೆವು. ನಮ್ಮ ಸಮುದಾಯದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ನಿರಂತರವಾಗಿ 254 ದಿನಗಳ ಕಾಲ ಹೋರಾಟ ನಡೆಸಿದ್ದರು. ಮುಖಂಡ ವಾದೀರಾಜ್, ಮಾಜಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶ್ರಮದಿಂದ ಮೀಸಲಾತಿ ಹೆಚ್ಚಳವಾಯಿತು. ಜಮ್ಮು ಕಾಶ್ಮೀರ 370 ಆರ್ಟಿಕಲ್ ರದ್ದು, ಸಿಎಎ ಜಾರಿ ಹಾಗೂ ಇನ್ನು ಮುಂತಾದ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ದೇಶವನ್ನು ಸದೃಢಗೊಳಿಸುತ್ತಿದೆ ಎಂದರು.

  ರಾಜ್ಯ ಕಾಂಗ್ರೆಸ್ ಜಾರಿಗೊಳಿಸಿದ ಸುಳ್ಳು ಆಶ್ವಾಸನೆಗಳಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಉಂಟಾಗಿರಬಹುದು. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ ಸಾಮಾನ್ಯ ಜನರಿಂದಲೇ ವಸೂಲಿಮಾಡಿ ಅವರಿಗೆ ನೀಡುತ್ತಿದೆ ಎಂದು ಆರೋಪಿಸಿದರು.

  ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಕಾಂಗ್ರೆಸ್ ಎಸ್ಸಿ/ಎಸ್ಟಿಗಳಿಗೆ ಅನ್ಯಾಯ ಮಾಡುತ್ತಲೇ ಬರುತ್ತಿದೆ. 2023-24ನೇ ಚುನಾವಣೆಯಲ್ಲಿ ಸುಮಾರು 11,144 ಕೋಟಿ ರೂ. ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗಿತ್ತು. 2024-25ನೇ ಸಾಲಿನಲ್ಲಿ 14,676 ಕೋಟಿ ರೂ, ಅನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಈ ಮೂಲಕ ಎಸ್ಸಿ, ಎಸ್ಟಿ ಸಮುದಾಯವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

  ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವಾಗ ಪರಿಶಿಷ್ಟಜಾತಿ ಮತ್ತು ಪಂಗಡದ ಪರವಾಗಿ ಸಾಕಷ್ಟು ಕೆಲಸವನ್ನು ಮಾಡಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಪ್ಪಿನ ಋಣವನ್ನು ತೀರಿಸಬೇಕಿದೆ ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮದಾಸ್, ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್, ಚಾಮರಾಜನಗರವ ಲೋಕಸಭಾ ಸಂಯೋಜಕ ಣೀಶ್, ಅಭ್ಯರ್ಥಿ ಎಸ್.ಬಾಲರಾಜ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮುಖಂಡ ದತ್ತೇಶ್‌ಕುಮಾರ್, ನೂರೋದುಶೆಟ್ಟಿ, ನಾಗಶ್ರೀಪ್ರತಾಪ್, ಅನಿಲ್. ಮಂಜುಳಾ, ಶಿವಕುಮಾರ್, ಸುಂದರ್, ನಟರಾಜ್, ಪ್ರಣಯ್ ಹಾಗೂ ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts