More

    ರುದ್ರಾಕ್ಷಿ ವಾಹನ ಸೇವೆಗೆ ಸಮರ್ಪಣೆ

    ಹನೂರು: ಶ್ರೀ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶುಕ್ರವಾರ ದಾನಿಗಳು ನೀಡಿದ್ದ ರುದ್ರಾಕ್ಷಿ ಉತ್ಸವ ವಾಹನಕ್ಕೆ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ದೇವರ ಸೇವೆಗೆ ಸಮರ್ಪಿಸಲಾಯಿತು.

    ರುದ್ರಾಕ್ಷಿ ಉತ್ಸವ ವಾಹನವನ್ನು ಇತ್ತೀಚೆಗಷ್ಟೇ ಮೈಸೂರಿನ ವೈದ್ಯ ದಂಪತಿ ಮಾದಪ್ಪನಿಗೆ ನೀಡಿದ್ದರು. ಮ.ಬೆಟ್ಟದಲ್ಲಿ ಶ್ರೀ ಮಹದೇಶ್ವರರ ಮೂರ್ತಿಯನ್ನು ಒಳಗೊಂಡಿರುವ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವವನ್ನು ನಿತ್ಯ ನೆರವೇರಿಸಲಾಗುತ್ತಿದೆ. ಆದರೆ, ಈ 3 ವಾಹನಗಳನ್ನು ಹಲವು ವರ್ಷಗಳಿಂದಲೂ ಬಳಸುತ್ತಿರುವುದರಿಂದ ಅವುಗಳ ಮರಗಳು ಶಿಥಿಲಗೊಂಡಿದ್ದವು.

    ಹಾಗಾಗಿ, ಹೊಸ ಉತ್ಸವ ವಾಹನಗಳ ಅಗತ್ಯವಿತ್ತು. ಈ ಬಗ್ಗೆ ಬೇಡಗಂಪಣ ಅರ್ಚಕರು 2 ವರ್ಷಗಳ ಹಿಂದೆ ಮೈಸೂರಿನ ವೈದ್ಯರೊಬ್ಬರನ್ನು ಭೇಟಿಯಾಗಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈ ವೇಳೆ ಹೆಸರು ಬಹಿರಂಗಪಡಿಸಿಲು ಇಚ್ಛಿಸದ ವೈದ್ಯ ದಂಪತಿ ಲಕ್ಷಾಂತರ ರೂ. ವ್ಯಯಿಸಿ ಮಾದಪ್ಪನ ಸನ್ನಿಧಿಗೆ 2021 ರಲ್ಲಿ ಹುಲಿ ಉತ್ಸವ ವಾಹನ ಹಾಗೂ 2022ರಲ್ಲಿ ಬಸವ ಉತ್ಸವ ವಾಹನವನ್ನು ಕೊಡುಗೆಯಾಗಿ ನೀಡಿದ್ದರು. ಇದೀಗ 12 ಲಕ್ಷ ರೂ ವೆಚ್ಚ ವ್ಯಯಿಸಿ 15 ಅಡಿ ಎತ್ತರದ ರುದ್ರಾಕ್ಷಿ ಉತ್ಸವ ವಾಹನವನ್ನು ನೀಡಿದ್ದಾರೆ. ಶ್ರೀ ಮಲೆ ಮಹದೇಶ್ವರರ ಸ್ವಾಮಿ ವೈದ್ಯರ ಮನೆ ದೇವರು ಎಂಬುದು ವಿಶೇಷ.

    ಸೇವೆಗೆ ಸಮರ್ಪಣೆ: ಬೆಳಗ್ಗೆ 6 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗರಿಸಲಾಗಿದ್ದ ನೂತನ ರುದ್ರಾಕ್ಷಿ ಉತ್ಸವ ವಾಹನದಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಲಾಯಿತು. ಈ ವಾಹನಕ್ಕೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವ ಹಾಗೂ ದಾನಿಗಳ ಸಮ್ಮುಖದಲ್ಲಿ ದೀಪ, ಧೂಪಧಾರತಿ ಹಾಗೂ ಮಂಗಳಾರತಿ ಜತೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

    ಬಳಿಕ ದೇಗುಲದ ಸುತ್ತ ಉತ್ಸವ ವಾಹನವನ್ನು ಪ್ರದಕ್ಷಿಣೆ ಹಾಕಿಸುವುದರ ಮೂಲಕ ಭಕ್ತರ ಸೇವೆಗೆ ಸಮರ್ಪಿಸಲಾಯಿತು. ಇದೇ ವೇಳೆ ಬಸವ ಹಾಗೂ ಹುಲಿ ವಾಹನ ಉತ್ಸವವನ್ನು ನೆರವೇರಿಸಲಾಯಿತು. ಫಲಹಾರ ಪ್ರಭುದೇವ ಸ್ವಾಮೀಜಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಬೇಡಗಂಪಣ ಪ್ರಧಾನ ಅರ್ಚಕ ಕೆ.ವಿ. ಮಾದೇಶ್, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಪಾರುಪತ್ತೆಗಾರ ಮಲ್ಲಿಕಾರ್ಜುನ್, ಮಹದೇವಸ್ವಾಮಿ, ಬೇಡಗಂಪಣ ಅರ್ಚಕರು, ಪ್ರಾಧಿಕಾರದ ನೌಕರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts