More

  ಜಿಲ್ಲೆಯಾದ್ಯಂತ ಬಕ್ರೀದ್ ಆಚರಣೆ ಸಂಭ್ರಮ

  ಚಾಮರಾಜನಗರ : ಜಿಲ್ಲೆಯಾದ್ಯಂತ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್(ಈದ್ ಉಲ್ ಅದ್‌ಹಾ) ಹಬ್ಬವನ್ನು ಸೋಮವಾರ ಶಾಂತಿ, ಸೌಹಾರ್ದತೆ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

  ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ತಾಲೂಕು ಕೇಂದ್ರಗಳಲ್ಲಿ ಹಾಗೂ ವಿವಿಧ ಗ್ರಾಮಗಳಲ್ಲಿ ಮುಂಜಾನೆಯೇ ಹತ್ತಿರದ ಈದ್ಗಾ ಮೈದಾನಕ್ಕೆ ತೆರಳಿದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮ-ಸಡಗರದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.
  ನಗರದ ಜಿಲ್ಲಾ ಕ್ರೀಡಾಂಗಣದ ಸಮೀಪದಲ್ಲಿರುವ ಹಾಗೂ ಸತ್ತಿರಸ್ತೆಯ ಸೋಮವಾರಪೇಟೆ ಬಳಿ ಇರುವ ಈದ್ಗಾ ಮೈದಾನದಲ್ಲಿ ಮುಂಜಾನೆಯೇ ಸಮುದಾಯದ ಗುರುಗಳು, ಮುಖಂಡರು, ಹಿರಿಯರು, ಯುವಕರು ಹಾಗೂ ಮಕ್ಕಳು ಸಂಭ್ರಮ-ಸಡಗರದಿಂದ ಭಾಗವಹಿಸಿ ಸಮೂಹಿಕ ಪ್ರಾರ್ಥನೆ ಸಲ್ಲಿಸಿದರು.

  ಒಬ್ಬರಿಗೊಬ್ಬರು ಆಲಿಂಗನ ಹಾಗೂ ಹಸ್ತಲಾಘವ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸ ಬಟ್ಟೆಗಳನ್ನು ತೊಟ್ಟು ಹಿರಿಯರು, ಮಕ್ಕಳ ಜತೆಗೆ ಕುರಾನ್ ೋಷವಾಕ್ಯಗಳನ್ನು ಪಠಿಸಿ, ಅಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಮಕ್ಕಳಿಗೆ ಹೆಚ್ಚಿನ ಆಯಸ್ಸನ್ನು ಕೊಟ್ಟು ಕಾಪಾಡಲಿ ಎಂದು ಸಮುದಾಯದ ಗುರುಗಳು ಶುಭ ಸಂದೇಶ ತಿಳಿಸಿ, ಬಕ್ರೀದ್ ಆಚರಣೆಯ ಮಹತ್ವ ಸಾರಿದರು.

  ಮುಸ್ಲಿಮರು ಆಚರಿಸುವ ಬಕ್ರೀದ್ ಹಬ್ಬದಲ್ಲಿ ದಾನಕ್ಕೆ ವಿಶೇಷ ಮಹತ್ವವಿದ್ದು, ಆರ್ಥಿಕವಾಗಿ ಅನುಕೂಲವಾಗಿರುವವರು, ಬಡವರಿಗೆ ದಾನ ಮಾಡಿದರು. ತಮ್ಮ ಮನೆಗಳಿಗೆ ಸಂಬಂಧಿಕರು ಹಾಗೂ ಸ್ನೇಹಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಿದ್ದರು. ಹಬ್ಬದ ಮತ್ತೊಂದು ವಿಶೇಷವಾದ ತ್ಯಾಗ, ಬಲಿದಾನದ ಸಂಕೇತವಾಗಿ ಕುರಿ ಮತ್ತು ಆಡುಗಳನ್ನು ಬಲಿ ಕೊಟ್ಟು, ಬಂಧು-ಬಾಂಧವರಿಗೆ ಮತ್ತು ನೆರೆ ಹೊರೆಯವರಿಗೆ ಸಮಾನವಾಗಿ ಹಂಚಿದರು. ಹಬ್ಬದ ಅಂಗವಾಗಿ ಮುಸ್ಲಿಮರು ವ್ಯಾಪಾರ, ವಹಿವಾಟಿಗೆ ವಿಶ್ರಾಂತಿ ನೀಡಿದ್ದರಿಂದ, ನಗರದಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ಪ್ರಾರ್ಥನಾ ಸ್ಥಳದಲ್ಲಿ ನಗರಸಭೆ ವತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಿ, ಕುಡಿಯುವ ನೀರು ವ್ಯವಸ್ಥೆ ಮಾಡಿದ್ದರು. ನಗರದಾದ್ಯಂತ ಬಕ್ರೀದ್ ಹಬ್ಬದ ಅಂಗವಾಗಿ ಭರ್ಜರಿ ಮಾಂಸ ಮಾರಾಟವಾಯಿತು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜನೆ ಮಾಡಲಾಗಿತ್ತು.

  See also  ಕಡ್ಲೆಪುರಿ ಎರಚಿ ಪ್ರತಿಭಟನೆ

  ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ:
  ನಗರದ ಗಾಳಿಪುರ ಬಡಾವಣೆ, ಬೀಡಿ ಕಾಲನಿ, ಅಹಮ್ಮದ್ ಕಾಲನಿ, ಕೆ.ಪಿ.ಮೊಹಲ್ಲಾ, ಮುಬಾರಕ್ ಮೊಹಲ್ಲಾ, ಜಾಮೀಯಾ ಮಸೀದಿ ಬಡಾವಣೆ ಹಾಗೂ ಇನ್ನಿತರ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ನಗರಸಭೆ ವತಿಯಿಂದ ಚರಂಡಿ, ರಸ್ತೆಗಳನ್ನು ಸ್ವಚ್ಛಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಮಾಡಲಾಗಿತ್ತು.
  ತ್ಯಾಜ್ಯ ಸಂಗ್ರಹಕ್ಕೆ ವಿಶೇಷ ಗಮನಹರಿಸಲಾಗಿತ್ತು ಎಂದು ನಗರಸಭಾ ಸದಸ್ಯ ಅಬ್ರಾರ್ ಅಹಮ್ಮದ್ ವಿಜಯವಾಣಿಗೆ ಮಾಹಿತಿ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts