More

  ಮಾರುಕಟ್ಟೆಗೆ ಬಂದ ನೇರಳೆ ಹಣ್ಣು

  ಚಾಮರಾಜನಗರ: ಹಣ್ಣುಗಳ ರಾಜ ಮಾವಿನ ಹಣ್ಣಿನ ಘಮಲಿನ ನಡುವೆಯೇ ನೇರಳೆ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟು ಗ್ರಾಹಕರನ್ನು ಸೆಳೆಯುತ್ತಿವೆ.

  ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೇರಳೆ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅದರಲ್ಲೂ ತೊರಹಳ್ಳಿ ಮೋಳೆ, ನೇರಳೆ, ಹಳೇಪುರ, ಹರವೆ, ಮಲೆಯೂರು ಇನ್ನಿತರ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ನೇರಳೆ ಹಣ್ಣನ್ನು ವ್ಯಾಪಾರಿಗಳು ಖರೀದಿ ಮಾಡಿಕೊಂಡು ಬಂದು ನಗರದಲ್ಲಿ ತಳ್ಳುಗಾಡಿಗಳಲ್ಲಿ ಮಾರಾಟ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ.

  ಹಿಂದಿನ ವರ್ಷದಲ್ಲಿ ನೇರಳೆ ಹಣ್ಣು ಇಳುವರಿ ಕಡಿಮೆಯಾಗಿದ್ದರಿಂದ ಮತ್ತು ಬೇರೆ ಜಿಲ್ಲೆಗಳಿಂದ ಖರೀದಿ ಮಾಡುತ್ತಿದ್ದರಿಂದ ಬೆಲೆ ಏರಿಕೆಯಾಗಿತ್ತು. ಆದರೆ ಈ ವರ್ಷ ಇಳುವರಿ ಹೆಚ್ಚಾಗಿದ್ದು ಕೆಜಿ ನೇರಳೆ ಹಣ್ಣಿಗೆ 150-200 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ. ಔಷಧೀಯ ಗುಣ ಹೊಂದಿರುವುದರಿಂದ ಗ್ರಾಹಕರು ನೇರಳೆ ಹಣ್ಣು ಖರೀದಿಗೆ ಮುಂದಾಗಿದ್ದಾರೆ. ಮೇ ತಿಂಗಳಿನಿಂದ ಜುಲೈ ನಡುವೆ ಸಿಗುವ ನೇರಳೆ ಹಣ್ಣು ಮಾರುಕಟ್ಟೆಯಲ್ಲಿ ಗರಿಷ್ಠ ಅಂದರೆ ಒಂದು ತಿಂಗಳು ಸಿಗಬಹುದಾಗಿದೆ. ವಾರದ ಹಿಂದೆಯಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ನೇರಳೆ ಹಣ್ಣಿನ ಬೆಲೆ ಆರಂಭದಲ್ಲಿ ಹೆಚ್ಚಾಗಿತ್ತು, ಆದರೆ ಹೆಚ್ಚು ಇಳುವರಿಯಿಂದ ಬರಬರುತ್ತಾ ಕಡಿಮೆಯಾಗುತ್ತಿದೆ.

  ಮಾರಾಟ ಜೋರು:
  ಸಾಮಾನ್ಯವಾಗಿ ನೇರಳೆ ಹಣ್ಣು ೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಹೂ ಬಿಟ್ಟು, ಏಪ್ರಿಲ್ ತಿಂಗಳಿನಲ್ಲಿ ಕಾಯಿ ಕಟ್ಟಿ ಮೇ ಅಥವಾ ಜೂನ್ ತಿಂಗಳಿನಲ್ಲಿ ಹಣ್ಣಾಗುತ್ತದೆ. ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ನೇರಳೆ ಹಣ್ಣಿನ ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿದೆ. ನಗರದ ಶ್ರೀ ಚಾಮರಾಜೇಶ್ವರ ಸಮೀಪದ ರಸ್ತೆಗಳು, ರಥದ ಬೀದಿ, ಹಳೇ ಬಸ್‌ನಿಲ್ದಾಣ, ದೊಡ್ಡಂಗಡಿ ಬೀದಿ ಹಾಗೂ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ತಳ್ಳುಗಾಡಿಗಳಲ್ಲಿ ನೇರಳೆ ಹಣ್ಣು ಮಾರಾಟ ಮಾಡಲಾಗುತ್ತಿದೆ.
  ಹಿಂದಿನ ವರ್ಷಕ್ಕಿಂತ ಈ ವರ್ಷ ಇಳುವರಿ ಚೆನ್ನಾಗಿ ಬಂದಿರುವುದರಿಂದ ಬೆಲೆಯೂ ಸ್ವಲ್ಪ ಕಡಿಮೆಯಾಗಿದೆ. 1 ದಿನದಲ್ಲಿ ಹಣ್ಣನ್ನು ಮಾರಾಟ ಮಾಡಬೇಕಿರುವುದರಿಂದ ಸ್ವಲ್ಪ ಕಷ್ಟವಾಗುತ್ತದೆ. ಅದಾಗ್ಯ ಈ ಬಾರಿಯ ನೇರಳೆ ಹಣ್ಣಿನ ವ್ಯಾಪಾರ ಜೋರಾಗಿದೆ. ಏನಿಲ್ಲಾ ಅಂದರೂ ದಿನಕ್ಕೆ 2-3 ಸಾವಿರ ರೂ. ಸಂಪಾದನೆಯಾಗುತ್ತದೆ ಎಂದು ಹಣ್ಣಿನ ವ್ಯಾಪಾರಿ ಮಹೇಶ್ ವಿಜಯವಾಣಿಗೆ ತಿಳಿಸಿದರು.

  See also  ಗೊಂಬೆಯಾಟ ಪ್ರದರ್ಶನ 12ರಿಂದ

  ಔಷಧಯುಕ್ತ ಹಣ್ಣು:
  ನೇರಳೆ ಹಣ್ಣು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಗ್ರಾಹಕರು ಹೆಚ್ಚಾಗಿ ಖರೀದಿಸಲು ಮುಂದಾಗುತ್ತಾರೆ. ಸಕ್ಕರೆ ಕಾಯಿಲೆ ನಿಯಂತ್ರಣ ಹಾಗೂ ಜೀರ್ಣಶಕ್ತಿಯನ್ನು ವೃದ್ಧಿಸುವ ಜಂಬೂನೇರಳೆ ಸಿಗುವುದೇ ಅಪರೂಪ. ಅಲ್ಲದೆ ಮೂಲವ್ಯಾಧಿ, ಮೂತ್ರದ ತೊಂದರೆ, ಪಿತ್ತಜನಕಾಂಗದ ತೊಂದರೆಗಳಲ್ಲಿ ನೇರಳೆ ಹಣ್ಣು ಪರಿಣಾಮಕಾರಿಯಾದ ಕೆಲಸ ಮಾಡುತ್ತದೆ. ಜಂಬೂ ನೇರಳೆ ಹಣ್ಣಿನ ಜ್ಯೂಸ್‌ನಿಂದ ಹೃದಯ ಕಾಯಿಲೆ, ರೋಗನಿರೋಧಕ ಶಕ್ತಿ ಹಾಗೂ ನಿರಂತರವ ಭೇದಿ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ. ಕ್ಯಾನ್ಸರ್ ರೋಗಾಣುಗಳನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿರುವ ನೇರಳೆ ಯಕೃತ್ ಸ್ವಚ್ಛತೆಗೂ ಸಹಕಾರಿಯಾಗುತ್ತದೆ. ನೇರಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಕಬ್ಬಿನಾಂಶ ಹೆಚ್ಚಾಗಿ ಇರುವುದರಿಂದ ಗಾಯ, ಅಸ್ತಮಾ ಕಾಯಿಲೆಗೆ ರಾಮಬಾಣವಾಗಿದೆ. ಜತೆಗೆ ಅರ್ಜಿರ್ಣ, ಕಿಡ್ನಿ ಸಮಸ್ಯೆ ನಿವಾರಣೆಗೆ ನೇರಳೆ ಹಣ್ಣು ಅನುಕೂಲವಾಗಿದೆ ಎಂದು ವೈದ್ಯರು ಹೇಳುತ್ತಾರೆ.

  ಈ ವರ್ಷದಲ್ಲಿ ಬರುತ್ತಿರುವ ನೇರಳೆ ಹಣ್ಣು ಬಹಳ ಚೆನ್ನಾಗಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಖರೀದಿ ಮಾಡುತ್ತಿದ್ದಾರೆ. ಆರಂಭದಲ್ಲಿ ಬೆಲೆ ಹೆಚ್ಚಾಗಿತ್ತು, ಬರಬರುತ್ತಾ ಕಡಿಮೆಯಾಗಿದೆ.
  ಮಹೇಶ್, ಹಣ್ಣಿನ ವ್ಯಾಪಾರಿ, ಚಾಮರಾಜನಗರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts