ಬುಡಕಟ್ಟು ಸಮುದಾಯಗಳಿಗೆ ಮೂಲಸೌಲಭ್ಯ ಒದಗಿಸಿ

ಚಾಮರಾಜನಗರ: ಭಾಗಶಃ ಅರಣ್ಯ ಪ್ರದೇಶವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಮೂಲಸೌಲಭ್ಯಗಳನ್ನು ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 146 ಹಾಡಿಗಳಿದ್ದು, 102 ಹಾಡಿಗಳು ಅರಣ್ಯದ ಅಂಚಿನಲ್ಲಿ ಬರುತ್ತವೆ. 44 ಹಾಡಿಗಳು ಅರಣ್ಯದ ಒಳಗೆ ಬರುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ 11 ಬುಡಕಟ್ಟು ಪಂಗಡಕ್ಕೆ 6 ತಿಂಗಳಿಗೆ ನೀಡುವ ಪೌಷ್ಟಿಕ ಆಹಾರವನ್ನು 1 ವರ್ಷಕ್ಕೆ ವಿಸ್ತರಿಸಿದ್ದಾರೆ. ಇದರಿಂದ ಖುಷಿಯಾಗಿರುವ ಬುಡಕಟ್ಟು ಸಮುದಾಯಗಳು ತಮಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಆದಿವಾಸಿಗಳು ವಾಸಿಸುತ್ತಿರುವ ಕಾಲನಿಗಳಲ್ಲಿ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ವಾಸದ ಮನೆಗಳು ಶಿಥಿಲಾವಸ್ಥೆ ತಲುಪಿವೆ. ರಸ್ತೆಗಳು ಹದಗೆಟ್ಟಿವೆ. ಕೆಲವು ಕಡೆಗಳಲ್ಲಿ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯವಿಲ್ಲ. ಕಾಡುಪ್ರಾಣಿಗಳ ಹಾವಳಿಯಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಉದ್ಯೋಗ ಸಿಗುತ್ತಿಲ್ಲ. ಆರೋಗ್ಯ ಸಮಸ್ಯೆ ಕಾಡುತ್ತಿದೆ. ಇಂತಹ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಬುಡಕಟ್ಟು ಜನರು ‘ಲೌಡ್ ಸ್ಪೀಕರ್’ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿಥಿಲಾವಸ್ಥೆ ತಲುಪಿರುವ ಮನೆಗಳು
ಸರ್ಕಾರ ವರ್ಷಪೂರ್ತಿ ಪೌಷ್ಟಿಕ ಆಹಾರ ಕೊಟ್ಟಿರುವುದು ಸಂತೋಷದ ವಿಚಾರ. ಆದರೆ, ನಮಗೆ ಮೂಲಸೌಕರ್ಯವೇ ಇಲ್ಲ. ಶೌಚಗೃಹಗಳಿಲ್ಲ, ಮುಖ್ಯವಾಗಿ ಸ್ವಚ್ಛತೆ ಇಲ್ಲ. ನಾವು ವಾಸಿಸುವ ಮನೆಗಳೆಲ್ಲವೂ ಶಿಥಿಲಾವಸ್ಥೆ ತಲುಪಿದ್ದು, ಅಲ್ಲೇ ವಾಸ ಮಾಡಬೇಕಾದ ಪರಿಸ್ಥಿತಿ ಇದೆ. ಸರ್ಕಾರ ಇತ್ತ ಗಮನಹರಿಸಿ ಮನೆ ನಿರ್ಮಾಣ ಮಾಡಿಕೊಡಬೇಕು.
-ರಂಗಮ್ಮ, ಕರಳಕಟ್ಟೆ ಗ್ರಾಮ, ಕೊಳ್ಳೇಗಾಲ

ವ್ಯವಸಾಯ ಮಾಡಲು ಸಾಧ್ಯವಿಲ್ಲ
ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಬರುತ್ತಾರೆ. ಗೆದ್ದ ಬಳಿಕ ಇತ್ತ ಯಾರೂ ಸುಳಿಯುವುದೇ ಇಲ್ಲ. ಸರ್ಕಾರ ನೀಡುವ ಪೌಷ್ಟಿಕ ಆಹಾರ ಸದ್ಯ ಜೀವನಕ್ಕೆ ನೆರವಾಗಿದೆ. ಇಲ್ಲಿರುವವರು ಕೂಲಿಕಾರ್ಮಿಕರು. ದಿನವೆಲ್ಲ ದುಡಿದು ಜೀವನ ಸಾಗಿಸುತ್ತಿದ್ದೇವೆ. ಕಾಡು ಪ್ರದೇಶದಲ್ಲಿರುವ ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಮೂಲ ಸೌಕರ್ಯದ ಕೊರತೆ ಬಾಧಿಸುತ್ತಿದೆ.
-ಜಡೆಯ್ಯ, ಕರಳಕಟ್ಟೆ, ಕೊಳ್ಳೇಗಾಲ

ಕಾಡುಪ್ರಾಣಿಗಳಿಗಿಂತ ಹೀನಾಯ ಸ್ಥಿತಿ
ಸರ್ಕಾರ ಆರು ತಿಂಗಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ವರ್ಷಪೂರ್ತಿ ನೀಡುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸೋಲಿಗ ಹಾಗೂ ಇತರ ಬುಡಕಟ್ಟು ಜನರು ಇನ್ನೂ ಕಾಡುಪ್ರಾಣಿಗಳಿಗಿಂತ ಕಡೆಯಾಗಿ ಜೀವನ ನಡೆಸುತ್ತಿದ್ದಾರೆ. ಈ ಜನಾಂಗದವರಿಗೆ ಮೂಲಸೌಕರ್ಯಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗದಿರುವುದು ದೌರ್ಭಾಗ್ಯವೇ ಸರಿ.
-ಮುರುಗೇಶ್, ಉಪಕಾರ ಕಾಲನಿ, ಗುಂಡ್ಲುಪೇಟೆ

ಮನೆ ನಿರ್ಮಾಣಕ್ಕೆ ಅನುದಾನವಿಲ್ಲ
ಸರ್ಕಾರ ಸೋಲಿಗರ ಅಭಿವೃದ್ಧಿಗೆ ಹಲವಾರು ಸವಲತ್ತುಗಳನ್ನು ನೀಡುತ್ತಿದೆ. ಆದರೆ, ಕೆಲವು ವರ್ಷಗಳಿಂದ ಮನೆ ನಿರ್ಮಾಣಕ್ಕೆ ಅನುದಾನ ನೀಡುತ್ತಿಲ್ಲ. ಇದರಿಂದ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಆರು ತಿಂಗಳು ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ವರ್ಷ ಪೂರ್ತಿ ನೀಡುವ ನಿರ್ಧಾರ ಒಳ್ಳೆಯದಾಗಿದ್ದರೂ ಸೋಲಿಗ ಮತ್ತು ಬುಡಕಟ್ಟು ಸಮುದಾಯದ ಜನರ ಸ್ವಾವಲಂಬಿ ಬದುಕಿಗೆ ಕ್ರಮಕೈಗೊಳ್ಳಬೇಕು.
-ಮಾದೇವ, ಮದ್ದೂರು ಕಾಲನಿ, ಗುಂಡ್ಲುಪೇಟೆ

ಅರಣ್ಯ ಕಾನೂನಿನ ತೊಡಕು
ಬಿಳಿಗಿರಿರಂಗನಬೆಟ್ಟ ಹಾಗೂ ಸುತ್ತಮುತ್ತಲಿನ ಗಿರಿಜನ ಪೋಡುಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಕರ್ಯ ಮರೀಚಿಕೆಯಾಗಿದೆ. ಜತೆಗೆ ಇದಕ್ಕೆ ಅರಣ್ಯ ಕಾನೂನಿನ ತೊಡಕು ಉಂಟಾಗುತ್ತಿದೆ. ಈ ಬಗ್ಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಬೇಕು.
-ಮಾದಯ್ಯ, ಕಲ್ಯಾಣಿಪೋಡು, ಯಳಂದೂರು

ಸ್ವಯಂ ಉದ್ಯೋಗ ಕಲ್ಪಿಸಿ
ಗಿರಿಜನರಿಗೆ ಪೌಷ್ಟಿಕ ಆಹಾರವನ್ನು ವರ್ಷಪೂರ್ತಿ ನೀಡುವ ಯೋಜನೆ ಜಾರಿಗೊಳಿಸಿರುವುದು ಉಪಯುಕ್ತವಾಗಿದೆ. ಇದರಿಂದ ಸೋಲಿಗ ಮಕ್ಕಳು ಹಾಗೂ ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಹಾಡಿಗಳಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಜತೆಗೆ, ಸರ್ಕಾರಗಳು ಸ್ವಯಂ ಉದ್ಯೋಗ ನೀಡುವ ಯೋಜನೆಗಳನ್ನು ಜಾರಿ ಮಾಡಿದರೆ ಮತ್ತಷ್ಟು ಸಹಕಾರಿಯಾಗುತ್ತದೆ.
-ರಾಮು, ಬಿಳಿಗಿರಿರಂಗನ ಬೆಟ್ಟ, ಯಳಂದೂರು

ರಸ್ತೆ, ವಿದ್ಯುತ್, ಕುಡಿಯುವ ನೀರಿಲ್ಲ
ಹನೂರು ಭಾಗದಲ್ಲಿ ಸುಮಾರು 84 ಪೋಡುಗಳಲ್ಲಿ ಗಿರಿಜನರು ವಾಸಿಸುತ್ತಿದ್ದು, ಸರ್ಕಾರ 6 ತಿಂಗಳು ಪೌಷ್ಟಿಕ ಆಹಾರವನ್ನು ನೀಡುತ್ತಿತ್ತು. ಆದರೆ ಇನ್ನುಳಿದ ತಿಂಗಳಲ್ಲಿ ಆಹಾರ ಪದಾರ್ಥವನ್ನು ಖರೀದಿಸಬೇಕಿತ್ತು. ಇದನ್ನು ಮನಗಂಡು ಇದೀಗ 12 ತಿಂಗಳು ಪೌಷ್ಟಿಕ ಆಹಾರ ಪದಾರ್ಥ ವಿತರಣೆಯ ಘೋಷಣೆ ಖುಷಿಯಾಗಿದೆ. ಸೋಲಿಗರ ಬಹುತೇಕ ಹಾಡಿಗಳಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಸೌಕರ್ಯ ಕೊರತೆ ಇದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಬುಡಕಟ್ಟು ಜನರಿಗೆ ಅನುಕೂಲ ಕಲ್ಪಿಸಬೇಕು.
-ಚಂದ್ರು ಮಾವತ್ತೂರು, ಉಪಾಧ್ಯಕ್ಷ, ಲ್ಯಾಂಪ್ ಸೊಸೈಟಿ, ಹನೂರು

ಹಾಡಿಗಳಲ್ಲೇ ವೈದ್ಯಕೀಯ ಸೇವೆ
ಸರ್ಕಾರ 12 ತಿಂಗಳು ಪೌಷ್ಟಿಕ ಆಹಾರ ಪದಾರ್ಥ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ಪಡಿತರದಲ್ಲಿ ಕೆಲವು ಬದಲಾವಣೆಯಾಗಬೇಕಿದೆ. ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಮೂಲಸೌಕರ್ಯ ಕಲ್ಪಿಸಬೇಕಿದೆ. ಈ ಭಾಗದಲ್ಲಿ ಬಹುತೇಕ ಹಾಡಿಗಳು ಕಾಡಂಚಿನಲ್ಲಿ ಇರುವುದರಿಂದ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಹಾಗಾಗಿ, ಹಾಡಿಗಳಲ್ಲೇ ವೈದ್ಯಕೀಯ ಸೇವೆ ಸಿಗುವಂತಾಗಬೇಕು. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು.
-ಮಾದಮ್ಮ, ಉಪಾಧ್ಯಕ್ಷೆ, ತಾಲೂಕು ಸೋಲಿಗ ಅಭಿವೃದ್ಧಿ ಸಂಘ, ಹನೂರು

ಮಾನವೀಯ ದೃಷ್ಟಿ ಮುಖ್ಯ
ಸೋಲಿಗರು ಮತ್ತು ಬುಡಕಟ್ಟು ಕಾಲನಿಗಳಲ್ಲಿ ಇಂದಿಗೂ ಸೂಕ್ತ ಮೂಲಸೌಕರ್ಯವಿಲ್ಲ. 2006ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಅರಣ್ಯದ ಒಳಗಿದ್ದರೂ ಮೂಲಸೌಕರ್ಯ ಕಲ್ಪಿಸಬೇಕು ಎಂಬ ನಿಯಮವಿದೆ. ಅರಣ್ಯ ಇಲಾಖೆಯವರು ಅವರದೇ ಕಾನೂನು ಹೇಳಿ ಅಡ್ಡಿಪಡಿಸುತ್ತಾರೆ. ಆ ತರಹದ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಯಾವುದೇ ಕಾನೂನು ಇದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಮಾನವೀಯತೆ ನೋಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೋಲಿಗ ಮತ್ತು ಬುಡಕಟ್ಟು ಸಮುದಾಯದ ಕಾಲನಿಗಳಲ್ಲಿ ಸರ್ಕಾರ ಮೂಲ ಸೌಕರ್ಯ ಕಲ್ಪಿಸಬೇಕು.
-ಮುತ್ತಯ್ಯ, ಚಾಮರಾಜನಗರ

2080 ಮನೆಗಳ ನಿರ್ಮಾಣಕ್ಕೆ ಪ್ರಸ್ತಾವನೆ
ಜಿಲ್ಲೆಯ ಸೋಲಿಗರು ಮತ್ತು ಬುಡಕಟ್ಟು ಸಮುದಾಯಗಳಿಗೆ 2080 ಮನೆಗಳ ನಿರ್ಮಾಣಕ್ಕೆ ಪಟ್ಟಿ ಮಾಡಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿಂದಿನ ಸರ್ಕಾರದಲ್ಲಿ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. ಈ ಸರ್ಕಾರದಲ್ಲಿ ವಿಶೇಷ ಆದ್ಯತೆ ಕೊಡಬಹುದು ಎಂಬ ನಿರೀಕ್ಷೆ ಇದೆ. ರಾಜೀವ್‌ಗಾಂಧಿ ವಸತಿ ನಿಗಮದ ಅಡಿಯಲ್ಲಿ ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಗ್ರಾಪಂ ಮಟ್ಟದಲ್ಲಿ ನೀಡುವ ಮನೆಗಳ ಟಾರ್ಗೆಟ್ ಹೆಚ್ಚಾಗಬೇಕು. ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡಿದರೆ ಅನುಕೂಲವಾಗುತ್ತದೆ. ಕೆಲವು ದಿನಗಳ ಹಿಂದೆ 2080 ಮನೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…