ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಿಂದಾಗಿ ಬುಡಕಟ್ಟು ಪಂಗಡದ ಆರು ತಿಂಗಳ ಕೂಳು ವರ್ಷದ ಕೂಳನ್ನಾಗಿಸಿದೆ.
ರಾಜ್ಯದ 8 ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ 11 ಬುಡಕಟ್ಟು ಸಮಾಜಗಳಿಗೆ ವರ್ಷಪೂರ್ತಿ ಪೌಷ್ಟಿಕ ಆಹಾರ ಒದಗಿಸಲು ಆಯವ್ಯಯದಲ್ಲಿ ವಾರ್ಷಿಕವಾಗಿ 50 ಕೋಟಿ ರೂ. ಮೀಸಲು ಇಡಲಾಗಿದೆ. ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆ ಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟದಕುರುಬ ಜನಾಂಗ ಈ ಸೌಲಭ್ಯ ಪಡೆಯಲಿವೆ. ಇವರಿಗೆ 6 ತಿಂಗಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು 12 ತಿಂಗಳಿಗೆ ವಿಸ್ತರಿಸಲಾಗಿದೆ.
ಚಾಮರಾಜನಗರ, ಮೈಸೂರು, ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಇತರ ಕಡೆಗಳಲ್ಲಿ 11 ಬುಡಕಟ್ಟು ಪಂಗಡ ವಾಸ ಮಾಡುತ್ತಿವೆ. ವನವಾಸಿಗಳಾಗಿರುವ ಇವರಿಗೆ ಮಳೆಗಾಲದಲ್ಲಿ ಉದ್ಯೋಗ ಸಿಗದೆ, ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹ ಮಾಡಲೂ ಸಾಧ್ಯವಾಗದೆ ಆದಾಯವಿಲ್ಲದೆ ಸೊರಗುತ್ತಿದ್ದರು. ಜತೆಗೆ ಹುಟ್ಟಿನಿಂದಲೇ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವವರಿಗೆ ಆಹಾರ ಸಿಗದೆ ಮತ್ತಷ್ಟು ಕುಗ್ಗುತ್ತಿದ್ದರು. ಅಪೌಷ್ಟಿಕತೆಯಿಂದ ಬಳಲುತ್ತಿರುವವರಲ್ಲಿ ಬುಡಕಟ್ಟು ಜನರೇ ಹೆಚ್ಚು ಸಂಖ್ಯೆಯಲ್ಲಿ ಸಿಗುತ್ತಾರೆ. ಈ ಹಿನ್ನೆಲೆಯಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮಳೆಗಾಲ ಆರಂಭವಾದ ಆರು ತಿಂಗಳು ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಈ ಸೌಲಭ್ಯವನ್ನು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ 6 ತಿಂಗಳಿನಿಂದ 1 ವರ್ಷಕ್ಕೆ ವಿಸ್ತರಿಸಿದ್ದಾರೆ.
ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರವನ್ನು ವರ್ಷ ಪೂರ್ತಿ ನೀಡುವುದರಿಂದ ಆಹಾರದ ಕೊರತೆ, ಅನುವಂಶೀಯ ಕಾಯಿಲೆ ಗುಣಪಡಿಸಲು ನೆರವಾಗುವ ವಿಶ್ವಾಸ ಮೂಡಿದೆ.
ರಕ್ತಹೀನತೆ ಕೊರತೆಯನ್ನು ನೀಗಿಸಲು 6 ತಿಂಗಳು ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ವರ್ಷವಿಡೀ ನೀಡಬೇಕೆಂದು ಆದಿವಾಸಿ ಮುಖಂಡರು ಒತ್ತಾಯಿಸುತ್ತಲೇ ಬಂದಿದ್ದರು. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬುಡಕಟ್ಟು ಸಮಾಜಕ್ಕೆ ಆಹಾರ ಭದ್ರತೆ ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಇದೀಗ ಸರ್ಕಾರ ಪೌಷ್ಟಿಕ ಆಹಾರ ವಿತರಣೆಯನ್ನು ವಿಸ್ತರಣೆ ಮಾಡಿರುವುದು ಬುಡಕಟ್ಟು ಜನಾಂಗಕ್ಕೆ ಸಂತಸ ತಂದಿದೆ.
ವಿತರಣೆಯಾಗುತ್ತಿರುವ ಪೌಷ್ಟಿಕ ಆಹಾರ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಂದು ಕುಟುಂಬಕ್ಕೆ 6 ತಿಂಗಳ ಅವಧಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ. 8 ಕೆಜಿ ರಾಗಿ, 3 ಕೆಜಿ ತೊಗರಿಬೇಳೆ, ತಲಾ 1 ಕೆಜಿ ಕಡಲೆಕಾಳು, ಅಲಸಂದೆ, ಹುರಳಿಕಾಳು, ಹೆಸರುಕಾಳು, ಸಕ್ಕರೆ, ಬೆಲ್ಲ, 30 ಮೊಟ್ಟೆ, 2 ಲೀಟರ್ ಅಡುಗೆ ಎಣ್ಣೆ, ಅರ್ಧ ಕೆಜಿ ನಂದಿನಿ ತುಪ್ಪ ನೀಡಲಾಗುತ್ತಿದೆ.
8150 ಕುಟುಂಬಗಳಿಗೆ ಆಹಾರ
ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯ ಕಾಡುಗಳಲ್ಲಿ ವಾಸ ಮಾಡುತ್ತಿರುವ 8150 ಬುಡಕಟ್ಟು ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಣೆಯಾಗುತ್ತಿದೆ. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರ ತಾಲೂಕಿನ 27 ಹಾಡಿಗಳ 1586 ಸೋಲಿಗರ ಕುಟುಂಬ, ಕೊಳ್ಳೇಗಾಲದ 90 ಹಾಡಿಗಳ 4257 ಸೋಲಿಗರ ಕುಟುಂಬ, ಗುಂಡ್ಲುಪೇಟೆಯ 31 ಹಾಡಿಗಳ 1045 ಸೋಲಿಗ ಕುಟುಂಬ, 439 ಜೇನು ಕುರುಬ ಕುಟುಂಬ, 98 ಕಾಡುಕುರುಬ ಕುಟುಂಬ ಸೇರಿ ಒಟ್ಟು 1582, ಯಳಂದೂರಿನ 10 ಹಾಡಿಗಳ 765 ಸೋಲಿಗ ಕುಟುಂಬ 6 ತಿಂಗಳವರೆಗೆ ಪೌಷ್ಟಿಕ ಆಹಾರ ಪಡೆಯುತ್ತಿವೆ. ಬಜೆಟ್ ೋಷಣೆ ಪ್ರಕಾರ ಮುಂದಿನ ದಿನಗಳಲ್ಲಿ ಈ ಕುಟುಂಬಗಳಿಗೆ ವರ್ಷಪೂರ್ತಿ ಪೌಷ್ಟಿಕ ಆಹಾರ ದೊರೆಯಲಿದೆ.
ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿರುವ ಈ ದಿನಗಳಲ್ಲಿ ಬುಡಕಟ್ಟು ಸಮಾಜಕ್ಕೆ ವರ್ಷಪೂರ್ತಿ ಪೌಷ್ಟಿಕ ಆಹಾರ ವಿತರಣೆ ಮಾಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈ ಮೂಲಕವಾದರೂ ಬುಡಕಟ್ಟು ಜನರಿಗೆ ಆಹಾರ ಭದ್ರತೆ ದೊರೆತು ರಕ್ತಹೀನತೆ, ಅಪೌಷ್ಟಿಕತೆ ಕಡಿಮೆಯಾಗಲಿ. 6 ತಿಂಗಳು ನೀಡುತ್ತಿರುವ ಆಹಾರವನ್ನು ವರ್ಷಪೂರ್ತಿ ನೀಡಬೇಕೆಂದು ಹಿಂದಿನಿಂದಲೂ ನಾವು ಒತ್ತಾಯ ಮಾಡುತ್ತಲೇ ಇದ್ದೆವು.
ಮುತ್ತಯ್ಯ, ಕಾರ್ಯದರ್ಶಿ, ರಾಜ್ಯ ಮೂಲ ಆದಿವಾಸಿ ವೇದಿಕೆ