ಚಾಮರಾಜನಗರ : ಲೇಖಕರು ಹಾಗೂ ಕಥೆಗಾರರಾದವರಿಗೆ ಜೀವನದ ಅನುಭವ ಬಹುಮುಖ್ಯ ಎಂದು ಹಿರಿಯ ಸಾಹಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ(ಮಂಜು ಕೋಡಿಉಗನೆ) ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಥೆಗಾರರೊಡನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಬಗ್ಗೆ ಕಳಕಳಿ ಇರುವವರಿಗೆ ದೊಡ್ಡ ಜವಾಬ್ದಾರಿ ಇರಬಾರದೆಂಬುದಕ್ಕೆ ನಾನೇ ಸಾಕ್ಷಿ. ಉತ್ತಮ ಕಥೆಗಾರರಾಗಬೇಕಾದರೆ ನೂರು ಕಥೆ ಬರೆಯಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಥೆ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕತೆ, ಕವಿತೆ ವಿದ್ಯಾರ್ಥಿಗಳ ಓದನ್ನು ಮತ್ತಷ್ಟು ವಿಸ್ತರಣೆ ಮಾಡುತ್ತದೆ. ಲೇಖಕರಾದವರಿಗೆ ಅಪಾರವಾದ ಅನುಭವ ಇದ್ದರೆ ಅತ್ಯುತ್ತಮ ಕತೆಗಳು ರಚನೆಯಾಗುತ್ತದೆ. ಗ್ರಾಮೀಣ ಜನರ ಬದುಕಿಗೆ ಸಂಬಂಧಿಸಿದ ಬರಹಗಳಿಗೆ ಸಾಹಿತ್ಯ ವಲಯದಲ್ಲಿ ಹೆಚ್ಚಿನ ಮಾನ್ಯತೆ ಇದ್ದು, ವಿದ್ಯಾರ್ಥಿಗಳು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
2016ರಲ್ಲಿ ಬಿಡುಗಡೆಯಾದ ಬೆಟ್ಟಬೇಗೆ ಕೃತಿ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ಇದು ಗ್ರಾಮೀಣ ಜನರ ಬದುಕಿನ ಸಂವೇದನಾಶೀಲತೆಗೆ ದೊರಕಿದ ಮಾನ್ಯತೆಯಾಗಿದೆ. ನನ್ನ ಆರಂಭಿಕ ಕೃತಿಗಳಿಂದ ಈವರೆಗಿನ ಕೃತಿಗಳೆಲ್ಲವೂ ಗ್ರಾಮೀಣ ಬದುಕಿಗೆ ಸಂಬಂಧಿಸಿದ ಕಥೆಗಳೇ ಆಗಿವೆ. ನಮ್ಮ ಕೃತಿಗಳನ್ನು ಬೇರೆಯವರು ವಿಮರ್ಶೆ ಮಾಡಿ ಮಾತನಾಡಿದಾಗ ಅದು ಹೆಚ್ಚಿನ ಖುಷಿ ನೀಡುತ್ತದೆ. ಹೆಚ್ಚಿನ ಅಧ್ಯಯನದಿಂದ ನಮ್ಮಲ್ಲಿ ವಿಮರ್ಶಾ ಮನೋಭಾವ ಬೆಳೆಯುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ವಿಭಾಗಕ್ಕೆ ಮಕ್ಕಳು ಸೇರುತ್ತಿಲ್ಲ ಎಂಬುದು ವಿಷಾದದ ಸಂಗತಿ. ಈ ಭಾಗದ ವಿಶ್ವವಿದ್ಯಾಲಯಗಳು ಜಾಗತಿಕ ನೆಲೆಯಲ್ಲಿ ತನ್ನದೇ ಆದ ಸ್ಥಾನ ಕಾಯ್ದುಕೊಂಡಿವೆ. ಪ್ರಗತಿಪರ ಧೋರಣೆ ಹೊಂದುವ ಮೂಲಕ ಸಾಮಾಜಿಕ ಬದುಕನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಬೋಧಕರು ಹೇಳುವ ವಿಚಾರಗಳನ್ನು ವಿದ್ಯಾರ್ಥಿಗಳು ಹುಡುಕುವ ಪ್ರಯತ್ನ ಮಾಡಬೇಕು. ವಿಮರ್ಶೆ ಮತ್ತು ಸಂವೇದನಾಶೀಲತೆಯಿಂದ ಕೂಡಿದ ವಿದ್ಯಾರ್ಥಿಗಳ ಜೀವನ ಸಾಧನೆಗೆ ಸಹಕಾರಿ ಎಂದು ತಿಳಿಸಿದರು.
ಬೆಟ್ಟಬೇಗೆ ಕೃತಿ ಕುರಿತು ವಿದ್ಯಾರ್ಥಿಗಳೊಂದಿಗೆ ಸಾಹಿತಿ ಮಂಜುಕೋಡಿ ಉಗನೆ ಸಂವಾದ ನಡೆಸಿದರು. ಬೆಟ್ಟಬೇಗೆ ಕಥೆ ರಚನೆಯ ಹಿನ್ನೆಲೆ ಹಾಗೂ ರಚನೆಗೆ ಬೇಕಾದ ಪೂರ್ವಸಿದ್ಧತೆ ಕುರಿತು ವಿದ್ಯಾರ್ಥಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಂಡರು.
ಕನ್ನಡ ವಿಭಾಗದ ಮುಖ್ಯಸ್ಥ ಎ.ಎಂ.ಶಿವಸ್ವಾಮಿ, ಸಹಾಯಕ ಪ್ರಾಧ್ಯಾಪಕ ಲೋಕೇಶ್, ಪ್ರಾಧ್ಯಾಪಕಿ ಶಶಿಕಲಾ, ಸುರೇಶ್, ಮಹೇಶ್ ಇತರರು ಉಪಸ್ಥಿತರಿದ್ದರು.