More

  ಬಿರುಗಾಳಿ-ಮಳೆಗೆ ನೆಲಕಚ್ಚಿದ ಬಾಳೆ

  ಚಾಮರಾಜನಗರ: ತಾಲೂಕಿನ ವ್ಯಾಪ್ತಿಯಲ್ಲಿ ಶನಿವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಸಾವಿರಾರು ಬಾಳೆ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ.

  ತಾಲೂಕಿನ ಚಂದಕವಾಡಿ, ಉತ್ತುವಳ್ಳಿ, ಬ್ಯಾಡಮೂಡ್ಲು, ದೇವರಾಜಪುರ, ಹರದನಹಳ್ಳಿ, ಅರಳೀಪುರ, ಹೆಬ್ಬಸೂರು ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಶನಿವಾರ ಮಧ್ಯಾಹ್ನ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಧರೆಗುರುಳಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ. ಉತ್ತುವಳ್ಳಿ ಗ್ರಾಮದ ರೈತ ರವಿ ಅವರು ಸುಮಾರು 7 ಎಕರೆ ಜಮೀನಿನಲ್ಲಿ 7000 ಬಾಳೆ ಗಿಡಗಳನ್ನು ಹಾಕಿದ್ದರು. ಶನವಾರ ಸುರಿದ ಮಳೆಯಿಂದಾಗಿ ಸುಮಾರು 3000 ಬಾಳೆ ಗಿಡಗಳು ನೆಲಕಚ್ಚಿದೆ. ಪರಿಣಾಮವಾಗಿ ಸುಮಾರು 5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಬಿರುಗಾಳಿ ಸಹಿತ ಮಳೆ ಯಾದರೇ ಉಳಿದ ಗಿಡಗಳು ಕೈ ಸೇರುವುದು ಅನುಮಾನವಾಗಿದೆ.

  ತಾಲೂಕಿನ ಚಂದಕವಾಡಿ ಹೋಬಳಿ ವ್ಯಾಪ್ತಿಯ ದೇವರಾಜಪುರ ಗ್ರಾಮದ ರೈತ ಬಸವರಾಜು ಅವರು 2 ಎಕರೆಯಲ್ಲಿ ಬೆಳೆದಿದ್ದ ಸುಮಾರು 2350 ಗಿಡ ಶನಿವಾರದ ಮಳೆಗೆ ಸಂಪೂರ್ಣವಾಗಿ ನಾಶವಾಗಿದೆ. ಬಡ್ಡಿ ಸಾಲ ಮಾಡಿ ಬಾಳೆ ಪಸಲು ಬೆಳೆಯಲಾಗಿತ್ತು. ನಾನು ತುಂಬಾ ಬಡತನದಲ್ಲಿದ್ದು, ಕೃಷಿಯನ್ನೇ ನಂಬಿ ಬದುಕುತ್ತಿದ್ದೇನೆ. ವಿಷ ಕುಡಿಯುವ ಹಂತದಲ್ಲಿದ್ದೇನೆ. ಆಗಾಗಿ ಸರ್ಕಾರ ಸೂಕ್ತ ಪರಿಹಾರ ಕೊಡಿಸಿಕೊಡಬೇಕು ಎಂದು ರೈತ ಬಸವರಾಜು ಅಳಲು ತೋಡಿಕೊಂಡಿದ್ದಾರೆ.ಅದಲ್ಲದೇ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ರೈತ ಶ್ರೀನಿವಾಸ್ ಅವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು 1500 ಬಾಳೆ ಬಿರುಗಾಳಿ ಮಳೆಯಿಂದಾಗಿ ಧರೆಗುರುಳಿವೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಅದೇ ಗ್ರಾಮದ ಹಲವಾರು ರೈತರು ಬೆಳೆದಿದ್ದ ಬಾಳೆ, ತೆಂಗು, ಅರಿಶಿಣ, ರಾಗಿ ಹಾಗೂ ಇನ್ನಿತರೆ ಬೆಳೆಗಳು ಮಳೆಯಿಂದಾಗಿ ನಾಶವಾಗಿದ್ದು, ರೈತರು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

  ಎಕರೆಗೆ 1 ಲಕ್ಷ ರೂ. ಪರಿಹಾರಕ್ಕೆ ಆಗ್ರಹ:
  ಕಳೆದ ಎರಡು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಬಾಳೆಗೆ ಉತ್ತಮ ಬೆಲೆ ಇದ್ದರೂ ಸಲು ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಎಕರೆಗೆ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅಹಿಂದ ಜಿಲ್ಲಾಧ್ಯಕ್ಷ ರಾಜಶೇಖರ್ ಎಸ್.ಬಸಪ್ಪನಪಾಳ್ಯ ಒತ್ತಾಯಿಸಿದ್ದಾರೆ. ರೈತರು ಎಕರೆಗೆ ಕನಿಷ್ಠ ಎಂದರೂ 1 ಲಕ್ಷ ರೂ. ಖರ್ಚು ಮಾಡಿ ಬಾಳೆ ಬೆಳೆದಿರುತ್ತಾರೆ. ಸಾಲ ಮಾಡಿ ತಿಂಗಳುಗಟ್ಟಲೇ ಫಸಲನ್ನು ಕಾದು ಬೆಳೆ ತೆಗೆದಿದ್ದು ಎಕರೆಗೆ 6 ಸಾವಿರ ಬೆಳೆಹಾನಿ ಪರಿಹಾರ ಕೊಡುವುದು ತೀರಾ ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದರು.
  ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೇ ಇದೇ ಕಾರಣಕ್ಕೆ, ರೈತರನ್ನು ಸಾಲದ ಸುಳಿಯಿಂದ, ಆತ್ಮಹತ್ಯೆ ದಾರಿಯಿಂದ ಬಚಾವ್ ಮಾಡಬೇಕಾದ್ದು ಸರ್ಕಾರದ ಹೊಣೆಗಾರಿಕೆಯಾಗಿದ್ದು 1 ಎಕರೆಗೆ 1 ಲಕ್ಷ ರೂ. ಪರಿಹಾರ ಕೊಡಬೇಕು ಇಲ್ಲದಿದ್ದರೇ ಅವರ ಪರಿಹಾರದ ಹಣ ಹಾನಿಗೊಳಗಾದ ಫಸಲುನ್ನು ತೆಗೆಸಲು ಸಾಕಾಗುವುದಿಲ್ಲ ಎಂದು ಆಗ್ರಹಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts