More

  ಮಳೆಯ ಅಧ್ವಾನಗಳ ಅರಿಯದ ಆಡಳಿತ

  ಚಾಮರಾಜನಗರ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆ ಅನೇಕ ಅಧ್ವಾನಗಳನ್ನು ಸೃಷ್ಟಿಮಾಡಿದ್ದು, ಮಳೆಯಿಂದಾಗುವ ಸಮಸ್ಯೆಗಳ ಮುನ್ಸೂಚನೆ ಅರಿಯದ ನಗರಸಭೆ ಆಡಳಿತ ವ್ಯವಸ್ಥೆಯಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ.

  ಜಿಲ್ಲಾ ಕೇಂದ್ರದಲ್ಲಿರುವ ರಾಜಕಾಲುವೆ, ಚರಂಡಿಗಳಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದುಕೊಂಡಿದೆ. ಅಲ್ಲದೇ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿರುವ ಪರಿಣಾಮವಾಗಿ ಶುಕ್ರವಾರ ಸುರಿದ ಭಾರಿ ಮಳೆಗೆ ನೀರು ಸರಾಗವಾಗಿ ಹರಿಯದೇ ಸಾಕಷ್ಟು ಸಮಸ್ಯೆ ಉಂಟಾಯಿತು. ವಿವಿಧ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಇನ್ನು ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಸಮಸ್ಯೆ ಅನುಭವಿಸುವಂತಾಯಿತು. ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಒಣಗಿದ ಮರಗಳನ್ನು ತೆರವುಗೊಳಿಸದೇ ಇರುವುದರಿಂದ, ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಮರಗಳು ಧರೆಗುರುಳಿ ಸಮಸ್ಯೆಗಳು ಉಂಟಾಗಿದೆ.

  ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಮಳೆ ಬಂದರೆ ಕೆರೆಯಂತಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ತುಂಬಿದ್ದ ಕಸವನ್ನು ಸೂಕ್ತ ಸಮಯಕ್ಕೆ ನಗರಸಭೆ ಸ್ವಚ್ಛಗೊಳಿಸಿದ್ದರೇ, ಇಂತಹ ಸಮಸ್ಯೆಗಳು ತಲೆದೋರುತ್ತಿರಲಿಲ್ಲ. ಮುಂದಿನ ದಿನಗಳಲ್ಲೂ ಜಿಲ್ಲಾ ಕೇಂದ್ರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಗರಸಭೆ ಮಳೆ ಅವಾಂತರಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

  ರಸ್ತೆಗಳಲ್ಲೇ ಮಳೆಯ ನೀರು:
  ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಕಾಮಗಾರಿ ಇನ್ನು ಪೂರ್ಣವಾಗದೇ ಇರುವುದರಿಂದ ಸಾಕಷ್ಟು ಕಡೆಗಳಲ್ಲಿ ಚರಂಡಿಯ ನೀರು ರಸ್ತೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಮುಂಭಾಗ, ಶ್ರೀಬಸವೇಶ್ವರ ಚಿತ್ರಮಂದಿರ ಹಾಗೂ ಇನ್ನಿತರೆ ಕಡೆಗಳಲ್ಲಿ ರಸ್ತೆಯಲ್ಲೇ ಮಳೆ ನೀರು ಕೆರೆಯಂತೆ ನಿಂತಿರುತ್ತದೆ. ದೊಡ್ಡಂಗಡಿ, ಚಿಕ್ಕಂಗಡಿ ಬೀದಿಯಿಂದ ಬರುವ ಮಳೆಯ ನೀರು ಚರಂಡಿಗಿಂತಲೂ ಹೆಚ್ಚಾಗಿ ಸಂತೇಮರಹಳ್ಳಿ ವೃತ್ತದ ರಸ್ತೆ ಮೇಲೆಯೇ ಹೆಚ್ಚಾಗಿ ಹರಿಯುತ್ತದೆ. ಇದರಿಂದಾಗಿ ಹಳೆ ರೇಷ್ಮೆ ಮಾರುಕಟ್ಟೆ ಸಮೀಪದಲ್ಲೂ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ನಗರಸಭೆ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ಇಂದಿಗೂ ಸಮರ್ಪಕವಾದ ರಸ್ತೆ ನಿರ್ಮಾಣವಾಗದ ಪರಿಣಾಮವಾಗಿ ಹಲವಾರು ರಸ್ತೆಗಳಲ್ಲೇ ಮಳೆಯ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕಿದೆ.

  ಸ್ವಚ್ಛವಾಗದ ಚರಂಡಿ, ಕಾಲುವೆಗಳು:
  ನಗರಸಭೆ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆ, ಚರಂಡಿಗಳಲ್ಲಿ ಇಂದಿಗೂ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಗಿಡಗಂಟಿಗಳು ಬೆಳೆದುಕೊಂಡಿರುವ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಸಂಗ್ರಹವಾಗಿರುವ ಪರಿಣಾಮವಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಮುಂಭಾಗ ಉಂಟಾಗುತ್ತಿದ್ದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಗಿದ್ದು, ಉಳಿದ ಚರಂಡಿಗಳಲ್ಲಿ ಮಳೆಗೂ ಮುನ್ನಾ ಸಂಗ್ರಹವಾಗುವ ತ್ಯಾಜ್ಯಗಳನ್ನು ಸೂಕ್ತ ಸಮಯಕ್ಕೆ ತೆರವುಗೊಳಿಸಬೇಕಿದೆ. ಇಂದಿಗೂ ಚರಂಡಿಯನ್ನೇ ಕಾಣದ ಅನೇಕ ಬಡಾವಣೆಗಳಿಗೆ ರಸ್ತೆ ಹಾಗೂ ಚರಂಡಿಯನ್ನು ನಿರ್ಮಾಣ ಮಾಡಿಕೊಡಬೇಕಿದೆ.
  ಇದರಿಂದ ಮಳೆಯ ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ಇಲ್ಲವಾದರೇ ಮಳೆಯಿಂದ ಹಲವಾರು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುವಂತಾಗುತ್ತದೆ.

  ಒಣಗಿದ ಮರಗಳ ತೆರವು ಮಾಡಬೇಕು:
  ನಗರದ ಅನೇಕ ಉದ್ಯಾನವನ ಹಾಗೂ ರಸ್ತೆಬದಿಗಳಲ್ಲಿ ಇರುವ ಒಣಗಿದ ಮರ ಹಾಗೂ ಹಳೆಯ ವಿದ್ಯುತ್ ಕಂಬಗಳನ್ನು ತೆದವುಗೊಳಿಸಲು ನಗರಸಭೆ ಮುಂದಾಗಬೇಕಿದೆ. ಈಗಾಗಲೇ ಒಂದು ದಿನ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಶ್ರೀಚಾಮರಾಜೇಶ್ವರ ದೇವಸ್ಥಾನದ ಉದ್ಯಾನವನ, ಭ್ರಮರಾಂಭ ಬಡಾವಣೆ ಹಾಗೂ ಇನ್ನಿತರೆ ಕಡೆಗಳಲ್ಲಿ ಒಣಗಿ ನಿಂತಿದ್ದ ಮರಗಳು ಧರೆಗುರುಳಿದೆ. ಸಾಕಷ್ಟು ಕಡೆಗಳಲ್ಲಿ ಹಳೆಯ ವಿದ್ಯುತ್ ಕಂಬಗಳು ಭಾಗಿ ಸಮಸ್ಯೆ ಉಂಟಾಗಿದೆ. ಆದರೆ ಯಾವುದೇ ರೀತಿಯ ಪ್ರಾಣಾಪಾಯವೂ ಸಂಭವಿಸಿಲ್ಲ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಗರಸಭೆ ಅಧಿಕಾರಿಗಳು ತೆಗೆದುಕೊಳ್ಳಬೇಕಿದೆ. ಒಣಗಿದ ಮರಗಳು ಹಾಗೂ ಹಳೆಯ ವಿದ್ಯುತ್ ಕಂಬಗಳನ್ನು ಗುರುತಿಸಿ ಶೀಘ್ರದಲ್ಲೇ ತೆರವುಗೊಳಿಸಿದರೆ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ.

  ನಗರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗೆ ಉರುಳಿದ್ದವು. ಅದನ್ನು ತಕ್ಷಣವೇ ತೆರವುಗೊಳಿಸಲಾಗಿದೆ. ಒಣಗಿದ ಮರಗಳು ಹಾಗೂ ಹಳೆಯ ವಿದ್ಯುತ್ ಕಂಬಗಳನ್ನು ಗುರುತಿಸಲು ಕ್ರಮವಹಿಸಲಾಗುತ್ತದೆ. ಚರಂಡಿಗಳಲ್ಲಿ ಈಗಾಗಲೇ ಹೂಳು ತೆಗೆಸಲಾಗಿದೆ. ಪ್ಲಾಸ್ಟಿಕ್ ತೆರವುಗೊಳಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಮಳೆಯಿಂದ ಸಮಸ್ಯೆಯಾಗಿರುವ ಸ್ಥಳಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮವಹಿಸಲಾಗುವುದು.
  -ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts