ಎಲ್ಲ ಸಮುದಾಯ ವಾಲ್ಮೀಕಿ ಜಯಂತಿ ಆಚರಿಸಲಿ

ಚಾಮರಾಜನಗರ:ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಮಹಾಕಾವ್ಯ ರಾಮಾಯಣವು ಜನರಲ್ಲಿ ಸೌಹಾರ್ದತೆ, ಪ್ರೀತಿ, ವಿಶ್ವಾಸ ಮೂಡಿಸಬಲ್ಲದು. ಆದ್ದರಿಂದಲೇ ಕಾವ್ಯದಲ್ಲಿ ರಾಮರಾಜ್ಯ ಕಲ್ಪನೆಯಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟರು.

ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ದೇಶದ ಅತಿದೊಡ್ಡ ಕೃತಿ ರಾಮಾಯಣ ಕಾವ್ಯವು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬೇಡರಾಗಿದ್ದ ವಾಲ್ಮೀಕಿ ಅವರು ಪರಿವರ್ತನೆಯಾಗಿ ತಪಸ್ಸು ಮಾಡಿ ಈ ಮಹಾಕಾವ್ಯ ರಚಿಸಿದ್ದಾರೆ. ದೆಹಲಿ, ಹರಿಯಾಣ, ಪಂಜಾಬ್‌ಗಳಲ್ಲಿಯೂ ಇಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ರಾಮಾಯಣ ಹಿಂದುಗಳ ಪವಿತ್ರ ಗ್ರಂಥವಾಗಿದ್ದು, ಎಲ್ಲ ಸಮುದಾಯವರು ವಾಲ್ಮೀಕಿ ಅವರ ಜನ್ಮ ದಿನ ಆಚರಿಸಬೇಕು. ಆದರೆ, ಒಂದೇ ವರ್ಗದವರು ಆಚರಿಸುತ್ತಿರುವುದು ನಮ್ಮ ದೇಶದ ದುರಂತ. ಅಂಬೇಡ್ಕರ್, ಬಸವಣ್ಣ, ಭಗೀರಥ, ವಾಲ್ಮೀಕಿ ಜಯಂತಿಗಳು ಆಯಾ ಸಮುದಾಯಗಳಿಗೆ ಸೀಮಿತ ಆಗುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.

ನಮ್ಮ ದೇಶದಲ್ಲಿ ಜಾತಿ ಪದ್ಧತಿ ಬೇರೂರಿದ್ದು, ಕಂದಾಚಾರಗಳು ತುಂಬಿ ತುಳುಕುತ್ತಿವೆ. ವಿದೇಶಗಳಿಗೂ ನಮಗೂ ಬಹಳಷ್ಟು ವ್ಯತ್ಯಾಸವಿದೆ. ಅಲ್ಲೆಲ್ಲ ವೃತ್ತಿ, ಹಿರಿಯರು, ಅಂಗವಿಕಲರಿಗೆ ಗೌರವ ನೀಡುತ್ತಾರೆ. ನಮ್ಮಲ್ಲಿನ ಜಾತಿ ಮತ್ತು ಕಂದಾಚಾರಗಳು ಹೋಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು ಎಂದು ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕರ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದ ಅವರು, ನಗರದಲ್ಲಿರುವ ವಾಲ್ಮೀಕಿ ಭವನದಲ್ಲಿ ತಿಂಗಳಿಗೊಂದು ಕಾರ್ಯಕ್ರಮ ನಡೆಯುತ್ತದೆ. ಉಳಿದಂತೆ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ , ರಾಮನು ರಾಮಾಯಣದ ಕಥಾನಾಯಕ ಹಾಗೂ ಪಿತೃವಾಕ್ಯ ಪರಿಪಾಲಕ. ಉತ್ತಮ ಆಳ್ವಿಕೆಯನ್ನು ನೀಡುವುದು ಹೇಗೆಂದು ರಾಮಾಯಣದಲ್ಲಿ ವಾಲ್ಮೀಕಿ ತಿಳಿಸಿಕೊಟ್ಟಿದ್ದಾರೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತದ ಅವಧಿಯಲ್ಲಿ ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ 27,700 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಆದ್ದರಿಂದಲೇ ಪರಿಶಿಷ್ಟರ ಕಾಲನಿಗಳಲ್ಲಿ ಚರಂಡಿ ಮತ್ತು ರಸ್ತೆಗಳು ಕಾಂಕ್ರಿಟಿಕರಣಗೊಂಡಿವೆ ಎಂದು ತಿಳಿಸಿದರು.

ಪರಿಶಿಷ್ಟ ವರ್ಗದ ಆದಿವಾಸಿಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಹಾಗೂ ಕೊಳವೆ ಬಾವಿ ಕೊರೆಸಲಾಗುತ್ತಿದೆ. ರಾಜ್ಯ ಸರ್ಕಾರ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಆದರೆ ನಾಯಕ ಸಮುದಾಯಲ್ಲಿಯೂ ಬಾಲ್ಯ ವಿವಾಹ ಪದ್ಧತಿಯಿದ್ದು ಅದನ್ನು ತೊರೆಯಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಚಿಂತಾಮಣಿಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಎನ್.ರಘು ಮುಖ್ಯ ಭಾಷಣ ಮಾಡಿದರು. ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ಸದಸ್ಯರಾದ ಉಮಾವತಿ, ಕೆ.ಪಿ.ಸದಾಶಿವಮೂರ್ತಿ, ಶಶಿಕಲಾ ಸೋಮಲಿಂಗಪ್ಪ, ಚೆನ್ನಪ್ಪ, ಎಂ.ರಾಮಚಂದ್ರ, ಆರ್.ಬಾಲರಾಜು, ಸಿಇಒ ಡಾ.ಕೆ.ಹರೀಶ್‌ಕುಮಾರ್, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಮುಖಂಡರಾದ ಮಹದೇವನಾಯಕ, ಪು.ಶ್ರೀನಿವಾಸನಾಯಕ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಇತರರಿದ್ದರು.

ಮೆರವಣಿಗೆ : ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರವನ್ನು ಸಾಂಸ್ಕೃತಿಕ ಕಲಾತಂಡಗಳ ಜತೆ ಮೆರವಣಿಗೆ ಮಾಡಲಾಯಿತು. ಪ್ರವಾಸಿ ಮಂದಿರದಿಂದ ದೊಡ್ಡಂಗಡಿ ಮತ್ತು ಚಿಕ್ಕಂಗಡಿ ಬೀದಿಗಳು, ಸಂತೇಮರಹಳ್ಳಿ ವೃತ್ತ ಮತ್ತು ಭುವನೇಶ್ವರಿ ವೃತ್ತದ ತನಕ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಜಿಪಂ ಅಧ್ಯಕ್ಷೆ ಶಿವಮ್ಮ, ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ವೀರಗಾಸೆ, ಡೊಳ್ಳು, ವಿವಿಧ ಮುಖವಾಡ ತೊಟ್ಟವರ ಕುಣಿತಗಳು, ಗಾಡಿ ಗೊಂಬೆ, ವಾದ್ಯ, ನಗಾರಿ, ತಮಟೆ ವಾದನಗಳು ಗಮನ ಸೆಳೆದವು. ಆಟೋ ಮೇಲೆ ಕುಳಿತ ವಾಲ್ಮೀಕಿ ಅವರ ವೇಷಧಾರಿ ಗಮನ ಸೆಳೆದರೆ, ಸೋಲಿಗರ ಗೊರುಕನ ನೃತ್ಯ ಆಕರ್ಷಣೀಯವಾಗಿತ್ತು.