ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನ ದುರಂತ: ಆರೋಗ್ಯ ಸಚಿವರ ಉಡಾಫೆ ಉತ್ತರ

ಮೈಸೂರು: ಸುಳ್ವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವನೆಯಿಂದಾಗಿ ಮೃತರ ಸಂಖ್ಯೆ ಏರಿಕೆಯಾಗುತ್ತಲಿದ್ದು, ಆರೋಗ್ಯ ಸಚಿವರಿಗೆ ಮಾತ್ರ ದುರಂತದ ವಿಷಯ ತಿಳಿದದ್ದು ನಿನ್ನೆಯಂತೆ. ಹೀಗಂತ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ಅವರೇ ಉಡಾಫೆ ಉತ್ತರ ನೀಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನಿರುವುದು ವಿಜಯಪುರದಲ್ಲಿ. ಅಲ್ಲಿಂದ ಬರಲು ಟೈಂ ಆಗುತ್ತದೆ. ನನಗೆ ವಿಷಯ ಗೊತ್ತಾಗಿದ್ದೇ ನಿನ್ನೆ ಸಂಜೆ 4 ಗಂಟೆಗೆ. ಸಿಎಂ ಕುಮಾರಸ್ವಾಮಿಯವರೇ ಬಂದಿದ್ದರು ತಾನೆ. ‘ನಾನು ಬಂದು ಇನ್ನೇನು ಮಾಡಬೇಕಿತ್ತು. ನನಗಿಂತ ದೊಡ್ಡವರೇ ಬಂದಿದ್ದರಲ್ಲ ಬಿಡಿ ಎಂದು ಸಚಿವರು ತಿಳಿಸಿದ್ದಾರೆ.

ನಾನು ಬಂದ ಮೇಲೆ ಹಲವು ಸಮಸ್ಯೆಗಳನ್ನು ಸರಿಪಡಿಸಿದ್ದೇನೆ. 400 ಅಂಬ್ಯುಲೆನ್ಸ್ ಖರೀದಿ ಮಾಡಿದ್ದೇವೆ. 360 ಜನ ವೈದ್ಯರನ್ನು ನೇಮಿಸಿಕೊಂಡಿದ್ದೇವೆ. ಇನ್ನು 1,000 ವೈದ್ಯರ ಕೊರತೆ ಇದೆ. ಅವೆಲ್ಲವನ್ನೂ ತುಂಬುವ ಪ್ರಯತ್ನ ಮಾಡುತ್ತೇವೆ. ಅದು ವಿಷಪ್ರಾಶನ ಎನ್ನುವುದನ್ನು ಖಚಿತ ಮಾಡಿಕೊಳ್ಳುವಲ್ಲಿ ತಡವಾಗಿದ್ದರಿಂದಾಗಿ ಅಸ್ವಸ್ಥರನ್ನು ಸ್ಥಳಾಂತರಿಸಲು ತಡವಾಗಿದ್ದು ಸತ್ಯ. ಸದ್ಯ 8 ಜನರ ಸ್ಥಿತಿ ಚಿಂತಾಜನಕವಾಗಿದೆ. ಮೊದಲು ಇರುವವರನ್ನು ಉಳಿಸಿಕೊಳ್ಳೋಣ. ಸಮಸ್ಯೆಗಳ ಬಗ್ಗೆ ನಂತರ ಮಾತನಾಡೋಣ ಎಂದು ಹೇಳಿದರು.

ಘಟನೆ ನಡೆದು ಎರಡು ದಿನಗಳು ಕಳೆದಿದ್ದು, ಇಂದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿ ಆಸ್ಪತ್ರೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಚಾಮರಾಜನಗರ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ ಸಚಿವರಿಗೆ ಸಾಥ್‌ ನೀಡಿದರು. (ದಿಗ್ವಿಜಯ ನ್ಯೂಸ್)

ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನ ದುರಂತ: 13ಕ್ಕೇರಿದ ಸಾವಿನ ಸಂಖ್ಯೆ

ಸುಳ್ವಾಡಿ ಮಾರಮ್ಮ ದೇವಸ್ಥಾನ ದುರಂತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ

Leave a Reply

Your email address will not be published. Required fields are marked *