ಜಿಲ್ಲಾದ್ಯಂತ ಅನುರಣಿಸಿದ ದೇಶಭಕ್ತಿ

ಚಾಮರಾಜನಗರ: ಪರಕೀಯರಿಂದ ಸ್ವಾತಂತ್ರೃ ಗಳಿಸಲು ಶಸ್ತ್ರ ರಹಿತ ಹೋರಾಟದ ಮಾರ್ಗವನ್ನು ಪರಿಚಯಿಸಿದ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 72ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಹಾಗೂ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಬಂದೂಕಿನ ಬಲದಿಂದ ಭಾರತವನ್ನು ಆಳುತ್ತಿದ್ದ ಬ್ರಿಟಿಷರಿಗೆ ಬರಿಗೈ ಹೋರಾಟದ ಪಾಠ ಕಲಿಸಿದವರು ಗಾಂಧೀಜಿ. ಅವರು ನಡೆಸಿದ ಅಸಹಕಾರ ಚಳವಳಿ, ಸತ್ಯಾಗ್ರಹ, ಹರತಾಳ, ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂಬ ಹೋರಾಟಗಳು ಇಡೀ ಭಾರತವನ್ನು ಒಗ್ಗೂಡಿಸಿದವು. ಪರಿಣಾಮ ದೇಶಕ್ಕೆ ಸ್ವಾತಂತ್ರೃ ದೊರಕಿತು ಎಂದರು.

ಅಸಹಕಾರ ಎಂಬ ಭಾರತದ ಸ್ವಾತಂತ್ರೃ ಹೋರಾಟದ ತತ್ವವನ್ನು ಆದರ್ಶವಾಗಿ ಇಟ್ಟುಕೊಂಡು ಹಲವು ದೇಶಗಳು ಹೋರಾಟ ಮಾಡಿ ಸ್ವಾತಂತ್ರೃ ಪಡೆದಿವೆ ಎಂದ ಅವರು, ಸ್ವಾತಂತ್ರೃ ಚಳವಳಿಯು ಭಾರತವನ್ನು ಭೌಗೋಳಿಕವಾಗಿ ಒಗ್ಗೂಡಿಸಿತು. ಭಾಷೆ, ಧರ್ಮ, ಪ್ರಾಂತ್ಯಗಳಿಗೆ ರಾಷ್ಟ್ರೀಯ ರೂಪ ನೀಡಿತು ಎಂದು ತಿಳಿಸಿದರು.

ಶಾಂತಿಯುತ ಹೋರಾಟದ ಮೂಲಕ ಸ್ವಾತಂತ್ರೃ ಗಳಿಸಿ 7ದಶಕಗಳು ಕಳೆದಿದ್ದು ಭಾರತವು ಹಲವು ಸಾಧನೆ ಮಾಡಿದೆ. ವ್ಯಾಪಾರ, ವಾಣಿಜ್ಯ, ವಿಜ್ಞಾನ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶಯಾನ, ಚಂದ್ರಯಾನ, ಮಂಗಳಯಾನ, ಉಪಗ್ರಹಗಳ ಉಡಾವಣೆ, ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಲಾಗಿದೆ. ಸಾಧಿಸಿಬೇಕಾಗಿರುವುದು ಇನ್ನೂ ಇದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಬ್ರಿಟಿಷರಿಂದ ಸ್ವಾತಂತ್ರೃ ಗಳಿಸುವುದಷ್ಟೇ ಮಹತ್ವದ ವಿಷಯವಲ್ಲ. ಭಾರತದ ಶೋಷಿತರಿಗೆ ಸಮಾನತೆ, ಸ್ವಾತಂತ್ರೃ ದೊರಕಿದಾಗ ಮಾತ್ರ ಸ್ವಾತಂತ್ರೃ ಪಡೆದಿದ್ದಕ್ಕೆ ಅರ್ಥ ಸಿಗಲಿದೆ ಎಂಬ ಅಂಬೇಡ್ಕರ್ ಅವರ ಮಾತನ್ನು ಆಚರಣೆಗೆ ತರಬೇಕು ಎಂದು ಹೇಳಿದರು.

ಜಿಲ್ಲೆಯ ಸ್ವಾತಂತ್ರೃ ಹೋರಾಟಗಾರರಾದ ಕರಿನಂಜನಪುರದ ತೋಟಪ್ಪ, ಕಾಗಲವಾಡಿ ಡಿ.ಬಸವಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಸದ ಆರ್.ಧ್ರುವನಾರಾಯಣ, ಜಿಪಂ ಅಧ್ಯಕ್ಷೆ ಶಿವಮ್ಮ ಅವರು ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಶಸ್ತ್ರ ಮೀಸಲು ಪಡೆಯ ಪೊಲೀಸರು, ವಿವಿಧ ಶಾಲೆಗಳ ಮಕ್ಕಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದಲ್ಲಿ ತಾಪಂ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ದಯಾನಿಧಿ, ನಗರಸಭಾಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಇತರರು ಪಾಲ್ಗೊಂಡಿದ್ದರು.