ಜಿಲ್ಲೆಯಲ್ಲಿಲ್ಲ ಸೂಕ್ತ ಆರೋಗ್ಯ ಸೇವೆ

ಚಾಮರಾಜನಗರ: ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷಯುಕ್ತ ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರನ್ನು ಮೈಸೂರಿನ ಪ್ರಮುಖ ಆಸ್ಪತ್ರೆಗಳಿಗೆ ಸಾಗಿಸಿದ್ದೇಕೆ? ನಮ್ಮ ತಾಲೂಕು ಹಾಗೂ ವಿಭಾಗೀಯ ಮಟ್ಟದ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಬಹುದಿತ್ತಲ್ಲವೇ? ಈ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೇರಿದಂತೆ ಅಗತ್ಯ ಸೌಲಭ್ಯಗಳು ಇರಲಿಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಸಾಮಾನ್ಯವಾಗಿ ವಿಷಾಹಾರ, ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡವರು ತೀವ್ರ ಉಸಿರಾಟದ ತೊಂದರೆಗೆ ಸಿಲುಕುತ್ತಾರೆ. ಅವರಿಗೆ ಕೃತಕ ಉಸಿರಾಟದ ಅಗತ್ಯವಿರುತ್ತದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇದ್ದರೆ ಮಾತ್ರ ಕೃತಕ ಉಸಿರಾಟದ ವ್ಯವಸ್ಥೆ ಮಾಡಲು ಸಾಧ್ಯ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇದ್ದರೂ ಅವುಗಳನ್ನು ನಿರ್ವಹಿಸುವ ತಂತ್ರಜ್ಞರು (ಇಂಟೆನ್‌ಸಿವಿಸ್ಟ್) ಇಲ್ಲ. ಆದ್ದರಿಂದಲೆ, ಅಸ್ವಸ್ಥಗೊಂಡವರನ್ನು ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮೈಸೂರಿಗೆ ಕಳುಹಿಸಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ.
ಹಾಗಾದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಇರುವ ವೆಂಟಿಲೇಟರ್‌ಗಳನ್ನು ನಿರ್ವಹಿಸುವವರು ಯಾರು ಎಂಬ ಪ್ರಶ್ನೆಗೆ, ‘ಕೆಲವು ನರ್ಸ್‌ಗಳು ಹಾಗೂ ಕಿರಿಯ ವೈದ್ಯರಿಗೆ ವೆಂಟಿಲೇಟರ್ ನಿರ್ವಹಣೆ ತರಬೇತಿ ನೀಡಲಾಗಿದೆ. ಆದರೆ, ಅವರು ಹೆಚ್ಚು ಗಾಯಾಳುಗಳು ಬಂದಾಗ ನಿರ್ವಹಣೆ ಮಾಡುವುದು ಕಷ್ಟ’ ಎಂದು ವೈದ್ಯರು ಹೇಳುತ್ತಾರೆ.

ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದಲ್ಲಿರುವ ಖಾಸಗಿ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ 7 ವೆಂಟಿಲೇಟರ್‌ಗಳಿವೆ. ಆದರೆ, ಚಾಮರಾಜನಗರ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಚಿಮ್ಸ್) ಬೋಧನಾ ಜಿಲ್ಲಾಸ್ಪತ್ರೆಯೂ ಆಗಿರುವ ನಗರದಲ್ಲಿರುವ 300 ಹಾಸಿಗೆಗಳ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ 4 ವೆಂಟಿಲೇಟರ್‌ಗಳಿವೆ. ಕೊಳ್ಳೇಗಾಲ ಪಟ್ಟಣದಲ್ಲಿರುವ ಉಪ ವಿಭಾಗ ಮಟ್ಟದ ಆಸ್ಪತ್ರೆಯಲ್ಲಿ ಒಂದು ವೆಂಟಿಲೇಟರ್ ಇದ್ದು ಅದು ಸಹ ಕೆಟ್ಟಿದೆ. ಯಳಂದೂರಿನ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲವೇ ಇಲ್ಲ. ಗುಂಡ್ಲುಪೇಟೆಯ ಆಸ್ಪತ್ರೆಯಲ್ಲಿ 2 ಇದ್ದರೂ ನಿರ್ವಾಹಕರು ಇಲ್ಲದೆ ಬಳಕೆ ಮಾಡುತ್ತಿಲ್ಲ.

ತುರ್ತು ನಿಗಾ ಘಟಕವಿರುವ ಆಸ್ಪತ್ರೆಗಳಲ್ಲಿ ಸರ್ಜಿಕಲ್ ಮತ್ತು ಮೆಡಿಕಲ್ ಎಂಬ 2 ಘಟಕಗಳಿರುತ್ತವೆ. ಅವುಗಳಲ್ಲಿ ವೆಂಟಿಲೇಟರ್ ಇರಲೇಬೇಕು. ಆದರೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಇಂತಿಷ್ಟು ವೆಂಟಿಲೇಟರ್ ಇರಲೇಬೇಕೆಂಬ ನಿಯಮವೇನೂ ಇಲ್ಲ. ಆದರೂ ಒಮ್ಮೊಮ್ಮೆ ಸಂಭವಿಸುವ ಸುಳ್ವಾಡಿ ದುರಂತದಂತಹ ಅವಘಡಗಳನ್ನು ನಿರ್ವಹಿಸಲಾದರೂ ವೆಂಟಿಲೇಟರ್‌ಗಳು ಇರಬೇಕಲ್ಲವೇ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಚಾಮರಾಜನಗರದಲ್ಲಿರುವ ಜಿಲ್ಲಾಸ್ಪತ್ರೆ ಮತ್ತು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮಾತ್ರ ವೆಂಟಿಲೇಟರ್ ಇದೆ. ಉಳಿದ ಖಾಸಗಿ ಆಸ್ಪತ್ರೆಗಳಲ್ಲಿಲ್ಲ. ಈ ವಿಷಯವನ್ನು ಅರಿತಿದ್ದರಿಂದಲೇ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಉಪ ವಿಭಾಗಾಧಿಕಾರಿಗಳು ಚರ್ಚಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಅಸ್ವಸ್ಥರನ್ನು ಮೈಸೂರಿಗೆ ಕಳುಹಿಸಿದರು.

ಒಂದು ವೇಳೆ ಚಾಮರಾಜನಗರದ 2 ಆಸ್ಪತ್ರೆಗಳಿಗೆ ಕಳುಹಿಸಿದ್ದರೆ ಕಷ್ಟವಾಗುತ್ತಿತ್ತು. ಇಲ್ಲಿಗೆ ಕಳುಹಿಸುವ ಬದಲು ಕೊಳ್ಳೇಗಾಲದಿಂದ ಮೈಸೂರಿಗೆ ಕಳುಹಿಸುವುದು ಸೂಕ್ತ ಎಂದು ತೀರ್ಮಾನಿಸಿ ಕಳುಹಿಸಲಾಗಿದೆ. ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಇಲ್ಲದಿದ್ದರೆ ಮತ್ತು ಅಸ್ವಸ್ಥರನ್ನು ಮೈಸೂರಿಗೆ ಕಳುಹಿಸದಿದ್ದರೆ ಇನ್ನಷ್ಟು ಜನರು ಸಾವಿನ ಮನೆ ಸೇರುತ್ತಿದ್ದರು.

ಸುಳ್ವಾಡಿ ದುರಂತದಂತಹ ಘಟನೆಯಿಂದಲಾದರೂ ಎಚ್ಚೆತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತುರ್ತು ನಿಗಾ ಇರುವ ಕಡೆ ವೆಂಟಿಲೇಟರ್‌ಗಳನ್ನು ಇಟ್ಟುಕೊಂಡು ಸಾವು ಬದುಕಿನೊಡನೆ ಹೋರಾಡುವವರನ್ನು ಬದುಕಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ
ಜಿಲ್ಲಾಡಳಿತ ತುರ್ತಾಗಿ ಕಾರ್ಯಪ್ರವೃತ್ತರಾದ್ದರಿಂದ ಮತ್ತು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ಸಾವಿನ ಸಂಖ್ಯೆ ಕಡಿಮೆಯಾಯಿತು.

ಸುಳ್ವಾಡಿ ಗ್ರಾಮದಿಂದ ಕೊಳ್ಳೇಗಾಲಕ್ಕೆ 70 ಕಿ.ಮೀ.ದೂರವಿದೆ. ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿ ಅಸ್ವಸ್ಥರಾದವರನ್ನು ನೇರವಾಗಿ ಇಲ್ಲಿಗೆ ತರಲು ಸಾಕಷ್ಟು ಕಾಲಾವಕಾಶ ಹಿಡಿಯುತ್ತಿತ್ತು. ಆದ್ದರಿಂದಲೆ, ಸುಳ್ವಾಡಿ ಸಮೀಪದ ಮಾರ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಸ್ವಸ್ಥರಾದವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕೊಳ್ಳೇಗಾಲಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಯಿತು.
ಆದರೆ, ಮಾರ್ಗಮಧ್ಯೆ ಮಧ್ಯಾಹ್ನ 12 ಗಂಟೆ ವೇಳೆಗೆ ಅಣ್ಣಯ್ಯಪ್ಪ ಎಂಬುವರು ಮೃತಪಟ್ಟರು. ಇದರಿಂದ ಎಚ್ಚೆತ್ತ ವೈದ್ಯರು ಅಸ್ವಸ್ಥರನ್ನು ತಕ್ಷಣ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ 7 ವೆಂಟಿಲೇಟರ್, 6 ವೈದ್ಯರು, 50 ಹಾಸಿಗೆಗಳಿದ್ದವು. ಗಂಭೀರ ಸ್ಥಿತಿಯಿದ್ದವರಿಗೆ ಚಿಕಿತ್ಸೆ ದೊರೆಯಿತು.

ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ಮಾರ್ಟಹಳ್ಳಿ ಆಸ್ಪತ್ರೆ ತಲುಪಿದ್ದರು. ಆ ವೇಳೆಗೆ ಅಸ್ವಸ್ಥರ ಸಂಖ್ಯೆ 60 ದಾಟಿತ್ತು. ಕೂಡಲೇ ಜಿಲ್ಲೆಯಲ್ಲಿದ್ದ 16 ಆಂಬುಲೆನ್ಸ್‌ಗಳನ್ನು ಕರೆಸಿ ಕೊಳ್ಳೇಗಾಲ ಮತ್ತು ಮೈಸೂರಿಗೆ ಅಸ್ವಸ್ಥರನ್ನು ಕಳುಹಿಸಲಾಯಿತು. ಅಕ್ಕಪಕ್ಕದ ಜಿಲ್ಲೆಯ ಆಂಬುಲೆನ್ಸ್‌ಗಳನ್ನು ಕರೆಸಿಕೊಳ್ಳಲಾಯಿತು.

ಅಸ್ವಸ್ಥರ ಸಂಖ್ಯೆ ಏರುತ್ತಿದ್ದನ್ನು ಗಮನಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಕೊಳ್ಳೇಗಾಲ ಮತ್ತು ಕಾಮಗೆರೆಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇದರ ಗಂಭೀರತೆ ಅರಿತು ರಾತ್ರಿ 10 ಗಂಟೆ ನಂತರ ಎಲ್ಲ ಅಸ್ವಸ್ಥರನ್ನು ಆಂಬುಲೆನ್ಸ್‌ಗಳ ಮೂಲಕ ಮೈಸೂರಿಗೆ ಕಳುಹಿಸಿದರು.

ಮೈಸೂರಿನ ಕೆ.ಆರ್.ಆಸ್ಪತ್ರೆ ಸೇರಿದಂತೆ ಇತರೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವಂತೆ ವ್ಯವಸ್ಥೆ ಮಾಡಿದರು. ಈ ಮೂಲಕ ಹೆಚ್ಚು ಸಾವು ಸಂಭವಿಸದಂತೆ ಕ್ರಮ ವಹಿಸಿದ್ದರು.