ವ್ಯಾಪಕ ಖಂಡನೆ ಬಳಿಕ ಬದಲಾದ ಸಚಿವರ ನಡೆ: ಮೃತ ಕುಟುಂಬಸ್ಥರ ಮನೆಗೆ ತೆರಳಿ ಪರಿಹಾರ ವಿತರಣೆ

ಚಾಮರಾಜನಗರ/ಮೈಸೂರು: ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ದುರಂತ ಸಾವಿಗೀಡಾದ ಕುಟುಂಬಸ್ಥರ ಮನೆಗಳಿಗೆ ಹೋಗಿ ಪರಿಹಾರ ಧನ ವಿತರಿಸುತ್ತೇವೆ ಎಂದು ಸಚಿವ ಪುಟ್ಟರಂಗ ಶೆಟ್ಟಿ ತಿಳಿಸಿದರು.

ಈ ಮೊದಲು ತಾವಿದ್ದಲ್ಲಿಗೆ ಬಂದು ಪರಿಹಾರ ಪಡೆಯಲು ಸಚಿವರು ಸೂಚಿಸಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್​ ”ಮತ ಕೇಳಲು ಮನೆ ಮನೆಗೆ ತೆರಳುತ್ತಾರೆ. ಆದರೆ, ಪರಿಹಾರ ಪಡೆಯಲು ಅವರಿದ್ದಲ್ಲಿಗೆ ಹೋಗಬೇಕಾ?” ಎಂದು ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಚಿವರು ಮೃತ ಕುಟುಂಬಸ್ಥರ ಮನೆಗಳಿಗೆ ತೆರಳಿ ಪರಿಹಾರ ನೀಡುವುದಾಗಿ ಮೈಸೂರಿನ ಕೆ.ಆರ್​.ಆಸ್ಪತ್ರೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಗೆ
ಸುಳ್ವಾಡಿ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳಲಾಗುವುದು. ಇದಕ್ಕೆ ಕಿಚ್ಚು ಗುತ್ತಿ ಮಾರಮ್ಮ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರು ಆಗಿರುವ ಹಾಗೂ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಅವರು ಒಪ್ಪಿದ್ದಾರೆ. ಸದ್ಯ ದೇವಸ್ಥಾನ ಜಿಲ್ಲಾಡಳಿತದ ವಶದಲ್ಲಿದೆ. ಮುಂದೆಯೂ ಅದನ್ನು ಸರ್ಕಾರವೇ ನಿರ್ವಹಿಸಲಿದೆ ಎಂದು ಶಾಸಕ ನರೇಂದ್ರ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ಸುಳ್ವಾಡಿ ವಿಷಪ್ರಸಾದ ದುರಂತ: ವ್ಯಾಪಕ ಟೀಕೆಗೊಳಗಾದ ಸಚಿವ ಪುಟ್ಟರಂಗ ಶೆಟ್ಟಿ ನಡೆ