ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಿ

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಗಳ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿಗಳು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ನಗರಸಭೆ ಚುನಾವಣೆಗೆ ನೇಮಕವಾಗಿರುವ ಚುನಾವಣಾ ಅಧಿಕಾರಿ, ಮಾದರಿ ನೀತಿ ಸಂಹಿತೆ ಪಾಲನೆ ತಂಡ, ಸೆಕ್ಟರ್ ಅಧಿಕಾರಿಗಳು, ಚುನಾವಣಾ ವೆಚ್ಚ ನಿರ್ವಹಣಾ ತಂಡದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭಾ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆ.10ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಚುನಾವಣೆ ಕೆಲಸಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಬೇಕೆಂದು ತಿಳಿಸಿದರು.

ಎರಡೂ ನಗರಸಭೆಗಳಲ್ಲಿ ತಲಾ 31 ವಾರ್ಡ್‌ಗಳು ಇವೆ. ಚಾಮರಾಜನಗರ ನಗರಸಭೆಯಲ್ಲಿ 61, ಕೊಳ್ಳೇಗಾಲ ನಗರಸಭೆಯಲ್ಲಿ 45 ಮತಗಟ್ಟೆಗಳು ಬರಲಿವೆ. ಈ ಮತಗಟ್ಟೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಇತರೆ ಮೂಲ ಸೌಕರ್ಯಗಳು ಲಭ್ಯವಿದೆಯೇ ಎಂಬ ಬಗ್ಗೆ ತುರ್ತಾಗಿ ಮತ್ತೊಮ್ಮೆ ಪರಿಶೀಲಿಸಬೇಕು. ಅಗತ್ಯ ಸೌಲಭ್ಯಗಳು ಬೇಕಿದ್ದರೆ ಶೀಘ್ರ ಕಲ್ಪಿಸಬೇಕು ಎಂದರು.

ಮತದಾನ ಅಧಿಕಾರಿ ಸಿಬ್ಬಂದಿ ಸೇರಿದಂತೆ ಇನ್ನಿತರ ಚುನಾವಣೆ ಕೆಲಸಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲು ಮಾಸ್ಟರ್ ಟ್ರೈನರ್ಸ್‌ಗಳನ್ನು ನೇಮಕ ಮಾಡಲಾಗಿದೆ. ಶೀಘ್ರವೇ ತರಬೇತಿ ಆಯೋಜನೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಪವರ್ ಪಾಯಿಂಟ್ ಮೂಲಕ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಚುನಾವಣಾ ಕಾರ್ಯಕ್ಕೆ ನೇಮಕವಾಗಿರುವ ತಹಸೀಲ್ದಾರ್‌ಗಳು, ನಗರಸಭೆ ಆಯುಕ್ತರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

9 ಚೆಕ್‌ಪೋಸ್ಟ್ ಆರಂಭ
ಚುನಾವಣಾ ಅಕ್ರಮ ತಡೆಗಟ್ಟಲು ನಗರಸಭೆ ವ್ಯಾಪ್ತಿಯ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗುತ್ತಿದೆ. ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ 5, ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ 4 ಚೆಕ್‌ಪೋಸ್ಟ್‌ಗಳ ಕಾರ್ಯಚಟುವಟಿಕೆಗಳಿಗೆ ಸ್ಥಳ ನಿಗದಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

ಆಯಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸಲಿವೆ. ಇನ್ನೂ ಅಗತ್ಯಬಿದ್ದಲ್ಲಿ ಸ್ಥಾಪನೆ ಮಾಡಬಹುದಾದ ಚೆಕ್‌ಪೋಸ್ಟ್‌ಗಳ ವಿವರಗಳನ್ನು ಆಯಾ ಭಾಗದ ಚುನಾವಣಾ ಅಧಿಕಾರಿಗಳು ನೀಡುವಂತೆ ಅವರು ತಿಳಿಸಿದರು.

Leave a Reply

Your email address will not be published. Required fields are marked *