ಹನೂರಿನಲ್ಲಿ ಬಂದ್‌ಗೆ ಬೆಂಬಲ

ಹನೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದಲ್ಲಿ ಬೆಳಗ್ಗೆ 8ರವರೆಗೆ ಖಾಸಗಿ ಬಸ್‌ಗಳು ಸಂಚರಿಸಿದವಲ್ಲದೆ, ಕೆಲವು ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬಳಿಕ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದವಲ್ಲದೆ, ಬಸ್ ಸಂಚಾರ ಸ್ಥಗಿತಗೊಂಡಿತು. ಸರ್ಕಾರಿ ಆಸ್ಪತ್ರೆ, ಕ್ಲಿನಿಕ್‌ಗಳು, ಮೆಡಿಕಲ್ ಷಾಪ್‌ಗಳು ತೆರೆದಿದ್ದವು. ಜನರ ಸಂಚಾರ ವಿರಳವಾಗಿತ್ತು. ಬೆಳಗ್ಗೆಯೇ ಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳು ಹಾಗೂ ಕೆಲಸದ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದ ವಿವಿಧ ಗ್ರಾಮಗಳ ಜನರು ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ಕುಳಿತು ತೊಂದರೆ ಅನುಭವಿಸಿದರು.
ಶಾಸಕ ಆರ್.ನರೇಂದ್ರ ಭಾಗಿ: ಶಾಸಕ ಆರ್. ನರೇಂದ್ರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು, ತಾ.ಪಂ ಸದಸ್ಯರು, ಪ.ಪಂ ಜನಪ್ರತಿನಿಧಿಗಳು, ವರ್ತಕರ ಸಂಘ, ಆಟೋ ಮತ್ತು ಕಾರು ಮಾಲೀಕರ ಸಂಘದ ಸದಸ್ಯರು ಹಾಗೂ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಕಾಂಗ್ರೆಸ್ ಕಚೇರಿ ಮುಂಭಾಗದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಹೊರಟು ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ದರ ಹೆಚ್ಚಳ ಖಂಡಿಸಿ ಘೋಷಣೆ ಕೂಗಿದರು. ಬಳಿಕ ಖಾಸಗಿ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ.ಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಡಿ.ಲೇಖಾ, ಮರಗದಮಣಿ, ತಾ.ಪಂ. ಸದಸ್ಯರಾದ ಜವಾದ್ ಆಹಮದ್, ರಾಜೇಂದ್ರ, ಪ.ಪಂ. ಉಪಾಧ್ಯಕ್ಷ ಬಸವರಾಜು ಇದ್ದರು.
ವಿವಿಧೆಡೆ: ಭಾರತ್ ಬಂದ್ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಕೌದಳ್ಳಿ ಗ್ರಾಮದಲ್ಲಿ ಎಸ್‌ಡಿಪಿಐ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿದವು. ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮಾರ್ಟಳ್ಳಿ ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಗ್ರಾಮಸ್ಥರು ರಸ್ತೆಗೆ ಕಲ್ಲುಗಳನ್ನಿಟ್ಟು ಸಂಚಾರ ತಡೆದು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.