ಚಾಮರಾಜನಗರದಲ್ಲಿ ಮಕ್ಕಳ ನಾಟಕ ಕಾರ್ಯಾಗಾರ

ಚಾಮರಾಜನಗರ: ಮುಂಬೈನ ಗಿಲ್ಲೊ ಥಿಯೇಟರ್ ರೆಪರ್ಟರಿ ಸಂಸ್ಥೆ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಒಂದು ದಿನದ ಮಕ್ಕಳ ನಾಟಕ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಜಿಲ್ಲೆಯ 8 ರಿಂದ 18 ವಯಸ್ಸಿನ 36 ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ನಾಟಕ, ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಹೇಳಿಕೊಡಲಾಯಿತು. ಅಲ್ಲದೇ, ನಾಟಕಗಳಿಗೆ ಸಂಬಂಧಿಸಿದಂತೆ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಚಟುವಟಿಕೆ ಮಾಡಿಸಲಾಯಿತು.

ಬೆಳಗ್ಗೆ 9.30 ರಿಂದ 10.30 ತನಕ ಕ್ಯಾಪ್ಟನ್ ಕೊಕೋನಟ್ ಆ್ಯಂಡ್ ಕೇಸ್ ಆಫ್ ಮಿಸ್ಸಿಂಗ್ ಬನಾನಸ್ ಎಂಬ ನಾಟಕವನ್ನು ಇಂಗ್ಲಿಷ್ ಹಾಗೂ ಕನ್ನಡ ಮಿಶ್ರಿತ ಭಾಷೆಗಳ ಮೂಲಕ ಪ್ರದರ್ಶಿಸಲಾಯಿತು. ನಂತರ ಮಕ್ಕಳಿಗೆ ರಂಗಭೂಮಿ, ಚಿತ್ರಕಲೆಯ ಬಗ್ಗೆ ತಿಳಿಸಿಕೊಡಲಾಯಿತು. ಮಕ್ಕಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ಗುಂಪು ಚಟುವಟಿಕೆ ನಡೆಸಲಾಯಿತು. ಬಳಿಕ ನಡೆದ ಕತೆಗಳ ಗೋದಡಿ ನಾಟಕ ಪ್ರದರ್ಶನ ಮಕ್ಕಳನ್ನು ರಂಜಿಸಿತು.

ಮುಂಬೈನ ಗಿಲ್ಲೊ ಥಿಯೇಟರ್ ರೆಪರ್ಟರಿ ಸಂಸ್ಥೆ ಪ್ರತಿವರ್ಷ ವಿವಿಧ ರಾಜ್ಯಗಳಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ನಾಟಕ ಪ್ರದರ್ಶನ ಹಾಗೂ ವಿವಿಧ ಚಟುವಟಿಕೆ ಮೂಲಕ ರಂಗಭೂಮಿಯತ್ತ ಆಸಕ್ತಿ ಮೂಡಿಸುತ್ತಿದ್ದು, ಆ ಮೂಲಕ ಸಣ್ಣ ವಯೋಮಾನದ ಪ್ರೇಕ್ಷಕರನ್ನು ತಲುಪುವುದು ಹಾಗೂ ಕಿರಿಯ ಕಲಾವಿದರನ್ನು ರೂಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಕಳೆದ ವರ್ಷವೂ ಈ ತಂಡ ನಗರದ ಶಾಂತಲಾ ಕಲಾವಿದರ ಸಂಸ್ಥೆಯ ಸಹಯೋಗದಲ್ಲಿ ನಾಟಕ ಪ್ರದರ್ಶನ ಹಾಗೂ ಮಕ್ಕಳ ಕಾರ್ಯಾಗಾರವನ್ನು ಆಯೋಜಿಸಿತ್ತು.

ಈ ತಂಡ ಗಿಲ್ಲೊ ಆನ್ ದ ಗೋ ಮಕ್ಕಳ ನಾಟಕಗಳ ತಿರುಗಾಟ ಬರಹದ ಮೂಲಕ ಡಿ.15ರವರೆಗೆ ರಾಜ್ಯದ ವಿವಿಧೆಡೆಗಳಲ್ಲಿ ಮಕ್ಕಳ ನಾಟಕ ಕಾರ್ಯಾಗಾರವನ್ನು ಆಯೋಜಿಸಿದೆ. ಈಗಾಗಲೇ ಬೆಂಗಳೂರು, ಗುಬ್ಬಿಗಳಲ್ಲಿ ಕಾರ್ಯಾಗಾರ ನಡೆಸಿದ್ದು, ಮುಂದಿನ ದಿನಗಳಲ್ಲಿ ಮೈಸೂರು, ಸರಗೂರು, ಶೇಷಗಿರಿ ಹಾಗೂ ಹೆಗ್ಗೋಡುಗಳಲ್ಲಿ ಕಾರ್ಯಾಗಾರ ನಡೆಸಲಿದೆ.