ಸ್ಟೈಪಂಡರಿ ನರ್ಸ್‌ಗಳಿಂದ ಮೌನ ಪ್ರತಿಭಟನೆ

ಚಾಮರಾಜನಗರ: ನರ್ಸ್ ಸೇವೆಯಲ್ಲಿಯೇ ಮುಂದುವರಿಸಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಸ್ಪತ್ರೆಯ ಸ್ಟೈಪಂಡರಿ ನರ್ಸ್‌ಗಳು ಕರ್ತವ್ಯ ಬಹಿಷ್ಕರಿಸಿ ಮೌನ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಸ್ಪತ್ರೆ ಎದುರು ಬೆಳಗ್ಗೆ ಜಮಾಯಿಸಿದ ಸ್ಟೈಪಂಡರಿ ನರ್ಸ್‌ಗಳು, ಕಳೆದ 3 ವರ್ಷದಿಂದ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮನ್ನು ಸೇವೆಯಿಂದ ತೆಗೆದುಹಾಕಲು ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಾಗಿ ಪರಿವರ್ತನೆಯಾದ ನಂತರ 2015ರ ಡಿಸೆಂಬರ್‌ನಲ್ಲಿ 60 ಸ್ಟೈಪಂಡರಿ ನರ್ಸ್‌ಗಳನ್ನು 6 ತಿಂಗಳ ಅವಧಿಗೆ ನೇಮಕ ಮಾಡಲಾಗಿತ್ತು. 3 ವರ್ಷಗಳಿಂದ 6 ತಿಂಗಳಿಗೊಮ್ಮೆ ನಮ್ಮ ಸೇವೆಯನ್ನು ಮುಂದುವರಿಸಲಾಗಿದೆ. ಈಗ ತೆಗೆದು ಹಾಕಿ ಸ್ಟೈಪಂಡರಿ ಆಧಾರದಲ್ಲಿ ಹೊಸ ನರ್ಸ್‌ಗಳನ್ನು ನೇಮಕ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.

ಈ ಹುದ್ದೆಯನ್ನು ನಂಬಿಕೊಂಡು ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೇವೆ. ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ಪಾಲಕರನ್ನು ಜತೆಗಿರಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಎಚ್.ಎಸ್.ರಾಜೇಂದ್ರ ಅವರು, ನವೆಂಬರ್ ತನಕ ಮಾತ್ರ ಹಳೆಯ ಸ್ಟೈಪಂಡರಿ ನರ್ಸ್‌ಗಳ ಸೇವೆ ಇರುತ್ತದೆ. ನಂತರ ಹೊಸ ನೇಮಕಾತಿ ನಡೆಸುವುದಾಗಿ ಹೇಳಿದ್ದರು. ಇದರಿಂದ ನಾವು ಕಂಗಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

ಡೀನ್ ಹೇಳಿಕೆ ಬಗ್ಗೆ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಗೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಒಳಗುತ್ತಿಗೆ ಆಧಾರದಲ್ಲಿ ಮುಂದುವರಿಸಿ ಎಂದು ಕೋರಿದ್ದೇವೆ. ಯಾರೊಬ್ಬರು ಪ್ರತಿಕ್ರಿಯೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾನವೀಯತೆಯ ದೃಷ್ಟಿಯಿಂದ ನಮ್ಮ ಸೇವೆಯನ್ನು ಮುಂದುವರಿಸಿ ನಮ್ಮ ಕುಟುಂಬಗಳು ಬೀದಿ ಪಾಲಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ನರ್ಸ್‌ಗಳಾದ ಕುಮಾರ್, ಬಿ.ಚುಂಚನಗಿರಿ, ಸೂಸನ್ ಅಬ್ರಾಹಂ, ಶಾರದಮ್ಮ, ನಂದಿನಿ, ಮಹೇಶ್, ರಾಜೇಶ್, ಶೃತಿ, ನಾಗಲಾಂಬಿಕೆ ಇತರರು ಪಾಲ್ಗೊಂಡಿದ್ದರು.