ಶುಶ್ರೂಷಕರ ಪ್ರತಿಭಟನೆ ಮುಂದುವರಿಕೆ

ಚಾಮರಾಜನಗರ: ಶುಶ್ರೂಷಕ ಸೇವೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿ ಜಿಲ್ಲಾಸ್ಪತ್ರೆಯ ಸ್ಟೈಪಂಡರಿ ಆಧಾರಿತ ಶುಶ್ರೂಷಕರು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ಮುಂದುವರಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ಸಂಜೆ ಜಮಾಯಿಸಿ ನಮಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು.
ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಚಿಮ್ಸ್) ಬೋಧನಾ ಆಸ್ಪತ್ರೆಯಾಗಿ ಪರಿವರ್ತನೆಯಾದ ನಂತರ 2015ರ ಡಿಸೆಂಬರ್‌ನಲ್ಲಿ 60 ಸ್ಟೈಪಂಡರಿ ನರ್ಸ್‌ಗಳನ್ನು 6 ತಿಂಗಳ ಅವಧಿಗೆ ನೇಮಕ ಮಾಡಲಾಗಿತ್ತು. 3 ವರ್ಷಗಳಿಂದ 6 ತಿಂಗಳಿಗೊಮ್ಮೆ ನಮ್ಮ ಸೇವೆಯನ್ನು ಮುಂದುವರಿಸಲಾಗಿದೆ. ಈಗ ತೆಗೆದು ಹಾಕಿ ಸ್ಟೈಪಂಡರಿ ಆಧಾರದಲ್ಲಿ ಹೊಸ ನರ್ಸ್‌ಗಳನ್ನು ನೇಮಕ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಖಂಡಿಸಿದರು.

ಈ ಹುದ್ದೆಯನ್ನು ನಂಬಿಕೊಂಡು ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೇವೆ. ಮಕ್ಕಳು ಹಾಗೂ ಪಾಲಕರನ್ನು ಜತೆಗಿರಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಎಚ್.ಎಸ್.ರಾಜೇಂದ್ರ ಅವರು, ನವೆಂಬರ್ ನಂತರ ಹೊಸ ನೇಮಕಾತಿ ನಡೆಸಲು ಮುಂದಾಗಿರುವುದರಿಂದ ಆತಂಕಗೊಂಡಿದ್ದೇವೆ ಎಂದು ಅಳಲು ತೋಡಿಕೊಂಡರು.

ಕಳೆದ 3 ವರ್ಷಗಳಿಂದಲೂ ಶುಶ್ರೂಷಕರು ರೋಗಿಗಳು ಹಾಗೂ ಸಾರ್ವಜನಿಕರ ಸೇವೆಯನ್ನು ಮಾಡುತ್ತಿದ್ದೇವೆ. ಈ ಹಿಂದೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದ ವೇಳೆ ಜಿಲ್ಲಾಧಿಕಾರಿ ಅವರು ಚಿಮ್ಸ್‌ನ ಡೀನ್ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಆ ಕೆಲಸವೂ ಆಗಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಶುಶ್ರೂಷಕರಾದ ಕುಮಾರ್, ರಾಜೇಶ್, ಬಂಗಾರಸ್ವಾಮಿ, ಮಹೇಶ್, ಗೀತಾ, ಮಹದೇವಮ್ಮ, ವಸಂತಮ್ಮ ಇತರರು ಪಾಲ್ಗೊಂಡಿದ್ದರು.