ಪ್ರಕೃತಿ ಚಿಕಿತ್ಸೆ ಅತ್ಯಂತ ಆರೋಗ್ಯಕರ ಪದ್ಧತಿ

ಚಾಮರಾಜನಗರ: ಪ್ರಕೃತಿ ಚಿಕಿತ್ಸಾ ಪದ್ಧತಿ ಅತ್ಯಂತ ಸುಲಭ ಹಾಗೂ ಆರೋಗ್ಯಕರವಾದದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮಲ್ಲಪ್ಪ ತೋಟದ ತಿಳಿಸಿದರು.

ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ಮೊದಲ ವರ್ಷದ ಪ್ರಕೃತಿ ಚಿಕಿತ್ಸಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ನಮ್ಮ ಆಹಾರ ಪದ್ದತಿ ತಿಳಿಸುವ ಜತೆಗೆ ಪ್ರಕೃತಿದತ್ತ ಚಿಕಿತ್ಸೆ ನೀಡಲಾಗುತ್ತದೆ. ಯೋಗಾಸನದ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ ಎಂದರು.

ಪ್ರಕೃತಿ ಚಿಕಿತ್ಸೆ ಒಂದು ಪ್ರಮುಖ ಪದ್ದತಿಯಾಗಿದ್ದು ಈಗ ವೈಜ್ಞಾನಿಕ ಮನ್ನಣೆ ನೀಡಲಾಗಿದೆ. ಆಯುಷ್ಯ ಇಲಾಖೆಯಡಿ ಅನುದಾನ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ನಗರದಲ್ಲಿ ಸರ್ಕಾರ ಹಾಗೂ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಸಹಯೋಗದಲ್ಲಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ತೆರೆಯಲಾಗಿದೆ. ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕೇಂದ್ರ ಸರ್ಕಾರ ಪ್ರಕೃತಿ ಹಾಗೂ ಯೋಗ, ಆರ್ಯುವೇದ, ಹೋಮಿಯೋಪತಿ, ಯುನಾನಿ, ಸಿದ್ದ ಪದ್ದತಿಯನ್ನು ಒಳಗೊಂಡ ಆಯುಷ್ ಮಂತ್ರಾಲಯವನ್ನು ತೆರೆದಿದೆ. ಸಾಕಷ್ಟು ಅನುದಾನವನ್ನು ನೀಡಿ, ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು.

ಆಧುನಿಕ ವೈದ್ಯಕೀಯ ಪದ್ದತಿಯಲ್ಲೂ ಪ್ರಕೃತಿ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದು ಮೊದಲ ವರ್ಷವಾದ್ದರಿಂದ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ವರ್ಷದಿಂದ ಇಲಾಖೆಯ ವತಿಯಿಂದ ದೊಡ್ಡ ಮಟ್ಟದಲ್ಲಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಸ್ಪತ್ರೆಯ ವೈದ್ಯೆ ಡಾ. ಮಾನಸ ಮಾತನಾಡಿ, ಪ್ರಕೃತಿ ಚಿಕಿತ್ಸೆ ಮಹಾತ್ಮ ಗಾಂದೀಜಿ ಅವರಿಗೆ ಪ್ರಿಯವಾಗಿತ್ತು. 1945ರಲ್ಲಿ ಅಖಿಲ ಭಾರತ ಪ್ರಕೃತಿ ಚಿಕಿತ್ಸೆ ಫೆಡರೇಷನ್‌ಗೆ ಸಹಿ ಮಾಡಿ ಈ ಪದ್ದತಿಯನ್ನು ದೇಶಾದ್ಯಂತ ಹೆಚ್ಚು ಪ್ರಚುರಪಡಿಸುವಂತೆ ತಿಳಿಸಿದ್ದರು ಎಂದರು.

ಇದು ಆರ್ಯುವೇದದಂತೆ ಅತ್ಯಂತ ಹಳೆಯ ಪದ್ದತಿ, ಗ್ರಾಮೀಣ ಜನರು ಹೆಚ್ಚು ಪ್ರಕೃತಿ ಜತೆ ಒಡನಾಟ ಇಟ್ಟುಕೊಂಡಿದ್ದರಿಂದ ಅವರು ನೂರಾರು ಕಾಲ ಆರೋಗ್ಯಕರವಾಗಿ ಬಾಳುತ್ತಿದ್ದರು. ಆಹಾರದ ಪದ್ದತಿಯಲ್ಲಿ ವ್ಯತ್ಯಾಸಗಳಾಗಿ ರೋಗರುಜಿನಗಳು ಹೆಚ್ಚಾದವು. ಇವುಗಳನ್ನು ಬರದಂತೆ ತಡೆಯುವುದೇ ಪ್ರಕೃತಿ ಚಿಕಿತ್ಸೆಯಾಗಿದೆ. ನಮ್ಮ ದೇಶದ ಈ ಪದ್ದತಿಗೆ ಹೊರ ದೇಶದಲ್ಲಿ ಬೇಡಿಕೆಯಿದೆ ಎಂದರು.

ಗಾಂಧೀಜಿ ಅವರ ಹುಟ್ಟು ಹಬ್ಬವಾದ ಅ.2ರಂದೇ ಪ್ರಕೃತಿ ದಿನವನ್ನು ಆಚರಿಸಲಾಗುತ್ತಿತ್ತು, ಈ ವರ್ಷದಿಂದ ನ.18ನ್ನು ಪ್ರಕೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಕೃತಿ ಚಿಕಿತ್ಸೆ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಾಯಿತು, ಮಲ್ಲಯ್ಯನಪುರ ಬಳಿಯ ಆದರ್ಶ ಶಾಲೆಯಲ್ಲಿ ಗಿಡಗಳನ್ನು ನೆಡಲಾಯಿತು.