ತಾಂಬೂಲದ ಬದಲು ಮೋದಿ ಭಾವಚಿತ್ರ ನೀಡಿಕೆ

ಚಾಮರಾಜನಗರ: ನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ವಿವಾಹವಾದ ಜೋಡಿಯೊಂದು ಶುಭ ಹಾರೈಸಲು ಆಗಮಿಸಿದ್ದವರಿಗೆ ತಾಂಬೂಲದ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ವಿತರಿಸಿ ದಾಂಪತ್ಯ ಬದುಕಿಗೆ ಕಾಲಿಟ್ಟಿತು.

ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದ ನಂಜುಂಡಸ್ವಾಮಿ ಅವರ ಪುತ್ರ ಆನಂದಸ್ವಾಮಿ ಮತ್ತು ಮುಕ್ಕಡಹಳ್ಳಿಯ ನಾಗೇಂದ್ರ ಅವರ ಪುತ್ರಿ ಎನ್.ಪೂರ್ಣಿಮಾ ಅವರ ವಿವಾಹವನ್ನು ಸೋಮವಾರದ ನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು.

ಮದುವೆ ಆಮಂತ್ರಣ ಪತ್ರಿಕೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಮತ್ತು ಸುರಕ್ಷಿತ, ಸದೃಢ, ಬಲಿಷ್ಠ ಭಾರತಕ್ಕಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಎಂಬ ಘೋಷಣೆಯನ್ನು ಅಚ್ಚು ಹಾಕಿಸಿದ್ದರು. ಸಂಬಂಧಿಕರಿಗೆ, ಬಂಧುಗಳಿಗೆ, ಸ್ನೇಹಿತರಿಗೆ ಈ ವಿವಾಹ ಆಹ್ವಾನ ಪತ್ರಿಕೆಯನ್ನು ಹಂಚಿಕೆ ಮಾಡಿದ್ದರು.

ವಿವಾಹ ಮಹೋತ್ಸವದಲ್ಲಿ ನವಜೋಡಿಯನ್ನು ಆಶೀರ್ವದಿಸಿದವರಿಗೆ ತಾಂಬೂಲದ ಬದಲು ಪ್ರಧಾನಿ ಮೋದಿ ಅವರ ಭಾವಚಿತ್ರ ವಿತರಿಸಲಾಯಿತು. ವರ ಆನಂದಸ್ವಾಮಿ ಪ್ರಧಾನಿ ಮೋದಿ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಈ ರೀತಿ ಭಿನ್ನವಾಗಿ ವಿವಾಹವಾದರು.