ಕೊಂಗಳ್ಳಿ ಬೆಟ್ಟದಲ್ಲೂ ಉತ್ಸವ ಸಂಭ್ರಮ

ಚಾಮರಾಜನಗರ: ತಾಲೂಕಿನ ಗಡಿಯಲ್ಲಿರುವ ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಸೋಮವಾರ ಕಡೆಯ ಕಾರ್ತಿಕ ಉತ್ಸವ ನೆರವೇರಿತು.

ಬೆಟ್ಟದ ಸುತ್ತಲಿನ ಗ್ರಾಮಗಳು, ಮೈಸೂರು, ಮಂಡ್ಯ, ಎಚ್.ಡಿ.ಕೋಟೆ ತಾಲೂಕಿನ ಹಲವು ಗ್ರಾಮಗಳ ಜನರು ಟ್ರಾೃಕ್ಟರ್, ಆಟೋ, ಬೈಕ್‌ಗಳಲ್ಲಿ ಸೋಮವಾರ ಆಗಮಿಸಿ ಕಡೆಯ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಬೆಟ್ಟದಲ್ಲಿ ಮಲ್ಲಿಕಾರ್ಜುನ ಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಹುಲಿವಾಹನ ಸೇವೆ ನೆರವೇರಿಸಿದರು. ಹೂವಿನಿಂದ ಅಲಂಕೃತಗೊಂಡ ಹುಲಿ ವಾಹನದ ಮೇಲೆ ಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ವಿವಿಧ ಅಭಿಷೇಕಗಳನ್ನು ನೆರವೇರಿಸಿದರು.

ಭಕ್ತರು ಬೆಟ್ಟದಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿ ಸಾಮೂಹಿಕವಾಗಿ ಭೋಜನ ತಯಾರಿಸಿ ಸಹ ಪಂಕ್ತಿ ಭೋಜನ ಸೇವಿಸಿದರು. ಅರ್ಚಕ ಮಲ್ಲಿಕಾರ್ಜುನ ಸ್ವಾಮಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು.