ಶೌಚಗೃಹದಲ್ಲಿ ದುರ್ವಾಸನೆ, ಸ್ನಾನ ಕೊಠಡಿಯಲ್ಲಿ ಅನೈರ್ಮಲ್ಯ

ಚಾಮರಾಜನಗರ: ತಾಲೂಕಿನ ವಿವಿಧ ವಿದ್ಯಾರ್ಥಿನಿಲಯಗಳಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು.

ತಾಪಂ ಅಧ್ಯಕ್ಷೆ ದೊಡ್ಡಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾದ ಪಿ.ಕುಮಾರನಾಯಕ, ಮಹದೇವಶೆಟ್ಟಿ, ಜಿ.ಸಿ.ಮಹದೇವಸ್ವಾಮಿ, ಸದಸ್ಯರಾದ ರವೀಶ್, ಶಿವಮ್ಮ, ಅಶೋಕ್ ಅವರ ತಂಡವು ಮೊದಲಿಗೆ ಸಂತೇಮರಹಳ್ಳಿಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿತು.

ಈ ವಿದ್ಯಾರ್ಥಿನಿಲಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಶೌಚಗೃಹಗಳು ಗಬ್ಬು ನಾರುತ್ತಿತ್ತು, ಹಾಸಿಗೆ ಮೂಲೆ ಗುಂಪಾಗಿದ್ದು, ಸಿಸಿ ಕ್ಯಾಮರಾ ಕೆಟ್ಟಿದೆಯಲ್ಲದೆ, ಸ್ನಾನದ ಕೊಠಡಿಯಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದನ್ನು ತಂಡ ಗಮನಿಸಿತು. ಬಳಿಕ ಅಲ್ಲಿನ ಬಾಲಕಿಯರ ವಿದ್ಯಾರ್ಥಿನಿಲಯಕ್ಕೂ ಭೇಟಿ ನೀಡಿದಾಗಲೂ ಅಶುಚಿತ್ವ ಕಂಡುಬಂತು. ಸರಿಯಾಗಿ ನಿರ್ವಹಣೆ ಮಾಡುವಂತೆ ಸ್ಥಳದಲ್ಲಿದ್ದ 2 ಹಾಸ್ಟೆಲ್‌ಗಳ ಸಿಬ್ಬಂದಿಗೆ ತಾಕೀತು ಮಾಡಿದರು.

ಚಾಮರಾಜನಗರದ ಸರ್ಕಾರಿ ಮೆಟ್ರಿಕ್ ನಂತರದ ಗಿರಿಜನ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಲಾಯಿತು. ಅಲ್ಲಿನ 28 ವಿದ್ಯಾರ್ಥಿನಿಯರಿಗೆ ಮಲಗಲು ಒಂದೇ ಕೊಠಡಿ ಇದ್ದು ಸ್ಥಳಾವಕಾಶದ ಕೊರತೆ ಇರುವುದು ಗಮನಕ್ಕೆ ಬಂತು. ಬಳಿಕ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೂ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಂದ ಸಮಸ್ಯೆ ಆಲಿಸಿದಾಗ ಸ್ನಾನಕ್ಕೆ ಸೋಲಾರ್ ವ್ಯವಸ್ಥೆ ಹಾಗೂ ಇತರೆ ಸೌಲಭ್ಯಗಳ ಕೊರತೆ ಕಂಡುಬಂತು. ತಾಲೂಕಿನ ಯಡಿಯೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಹಾಜರಾತಿ ವಿವರ, ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಸಮರ್ಪಕವಾಗಿ ಆಹಾರ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರು, ಸರ್ಕಾರವು ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಆಗಾಗ್ಗೆ ಭೇಟಿ ನೀಡಿ ಸೂಕ್ತ ಹಾಜರಾತಿ, ಬಯೋಮೆಟ್ರಿಕ್ ಪರಿಶೀಲಿಸಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯಗಳು ತಲುಪುತ್ತಿರುವ ಕುರಿತು ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗುವುದು ಎಂದರು.

ದಿನನಿತ್ಯದ ತಿಂಡಿ ಮತ್ತು ಊಟದ ಪಟ್ಟಿಯಂತೆ ಮಕ್ಕಳಿಗೆ ರುಚಿಯಾದ ಊಟ, ತಿಂಡಿ ನೀಡಬೇಕು. ಹಾಸಿಗೆ, ಇನ್ನಿತರ ಅಗತ್ಯ ಪರಿಕರಗಳನ್ನು ಕಲ್ಪಿಸಬೇಕು ಈ ಬಗ್ಗೆ ತ್ವರಿತವಾಗಿ ಗಮನಹರಿಸುವಂತೆ ಸಂಬಂಧಿಸಿದವರಿಗೆ ತಿಳಿಸಲಾಗುವುದು ಎಂದರು.