ಅಮೃತಭೂಮಿಯಲ್ಲೊಂದು ಸರಳ ವಿವಾಹ

ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದ ಬಳಿಯಿರುವ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರವಾದ ಅಮೃತಭೂಮಿಯಲ್ಲಿ ವಕೀಲರಾದ ರಾಜೇಂದ್ರ ಮತ್ತು ನಾಗವೇಣಿ ಸರಳ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಲ್ಲಿನ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ವೇದಿಕೆಯಲ್ಲಿ ನಗರದ ರಾಮಸಮುದ್ರ ಬಡಾವಣೆಯ ಲೇಟ್ ಗೌರಮ್ಮ ಮತ್ತು ಮಹದೇವಯ್ಯ ಅವರ ಪುತ್ರ ಎಂ.ರಾಜೇಂದ್ರ ಹಾಗೂ ಅದೇ ಬಡಾವಣೆಯ ಲಲಿತಮ್ಮ ಮತ್ತು ಗುರುಸಿದ್ದಯ್ಯ ಅವರ ಪುತ್ರಿ ಜಿ.ನಾಗವೇಣಿ ವಿವಾಹವಾದರು. ಮಾನವತಾವಾದಿಗಳಾದ ಬುದ್ಧ ಮತ್ತು ಅಂಬೇಡ್ಕರ್ ಮಾರ್ಗದರ್ಶನದಂತೆ ವಿವಾಹ ನಡೆಯಿತು.

ರೈತಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಹಾಗೂ ಇತರರ ಸಮ್ಮುಖದಲ್ಲಿ ನೂತನ ವಧು-ವರರರು ಹಾಗೂ ಎರಡು ಕುಟುಂಬದವರು ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಹಾರ ಬದಲಾಯಿಸುವ ಮೂಲಕ ಸತಿಪತಿಗಳಾದರು. ದಂಪತಿಗೆ ಅತಿಥಿಗಳು, ಸಂಬಂಧಿಕರು, ಸ್ನೇಹಿತರು ಹಾಗೂ ರಾಮಸಮುದ್ರ ಗ್ರಾಮಸ್ಥರು ಶುಭ ಕೋರಿದರು.

ಮದುವೆಗಳಲ್ಲಿ ಸಾಮಾನ್ಯವಾಗಿ ತಾಂಬೂಲವಾಗಿ ಬಾಳೆಹಣ್ಣು, ತೆಂಗಿನಕಾಯಿ, ಕಿತ್ತಳೆಹಣ್ಣು, ಮಾವಿನಕಾಯಿ ನೀಡುವುದು ಸಾಮಾನ್ಯ. ಈ ವಿವಾಹದಲ್ಲಿ ತಾಂಬೂಲವಾಗಿ ಹಣ್ಣಿನಬೀಜ, ತರಕಾರಿ, ಒಂದು ಪುಸ್ತಕ ವಿತರಣೆ ಮಾಡಲಾಯಿತು. ಆದರೆ, ರುಚಿಕರ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಆದರ್ಶ ಮದುವೆ: ನೂತನ ದಂಪತಿಗೆ ಆಶೀರ್ವದಿಸಿ ಮಾತನಾಡಿದ ಚುಕ್ಕಿನಂಜುಂಡಸ್ವಾಮಿ, ಮದುವೆ ಎನ್ನುವುದು ಗಂಡು-ಹೆಣ್ಣು ಮತ್ತು ಎರಡು ಕುಟುಂಬಗಳಿಗೆ ಸಂಬಂಧಿಸಿದ್ದು, ಇಡೀ ಸಮಾಜಕ್ಕೋಸ್ಕರ ಮದುವೆಯನ್ನು ಆಡಂಬರವಾಗಿ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕುವುದು ಒಳ್ಳೆಯದಲ್ಲ. ರಾಜೇಂದ್ರ ಮತ್ತು ನಾಗವೇಣಿ ಅವದು ಒಂದು ಆದರ್ಶ ವಿವಾಹವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಎಂ.ರಾಜೇಂದ್ರ ಮಾತನಾಡಿ, ಮೊದಲಿನಿಂದಲೂ ಪ್ರಕೃತಿ ಮೇಲೆ ನಂಬಿಕೆ, ವಿಶ್ವಾಸವಿತ್ತು. ಆದರಿಂದ ಅಮೃತಭೂಮಿಯಲ್ಲಿ ವಿವಾಹವಾಗುವ ನಿಶ್ವಯಿಸಿ, ಇಬ್ಬರ ಕಡೆಯಿಂದಲೂ ಒಪ್ಪಿಗೆ ಪಡೆದು ವಿವಾಹವಾಗಿರುವುದು ಸಂತಸ ತಂದಿದೆ ಎಂದರು.
ಚಿತ್ರನಟ ರೆಬಲ್‌ಸ್ಟಾರ್ ಅಂಬರೀಶ್ ಅವರ ನಿಧನಕ್ಕೆ 2 ನಿಮಿಷ ಮೌನಾಚರಣೆ ಸಲ್ಲಿಸಿ ಸಂತಾಪ ಸೂಚಿಸಲಾಯಿತು.

ಬೌದ್ಧ ಧಮ್ಮಾಚಾರಿ ಪ್ರಭುಸ್ವಾಮಿ ವಿವಾಹ ಕಾರ್ಯ ನೆರವೇರಿಸಿದರು. ನಿವೃತ್ತ ಸರ್ಕಾರಿ ಅಭಿಯೋಜಕರಾದ ವಿ.ಪಿ.ನಾಯಕ್, ಲೂಕಕಾಸ್ಮೊ, ವಕೀಲರಾದ ಎಂ.ಮಹದೇವಸ್ವಾಮಿ, ನಾಗಮಾರ್ಷಲ್ ಆರ್ಟ್ಸ್‌ನ ಸೋಸಲೆ ಸಿದ್ದರಾಜು ಇತರರು ಹಾಜರಿದ್ದರು.