ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿ ಅಭಿವೃದ್ಧಿಗೆ ವರದಿ ಸಲ್ಲಿಕೆ

ಚಾಮರಾಜನಗರ : ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿ (81)ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿ ತಯಾರಿಸಿ ಅನುಮೋದನೆಗಾಗಿ ಕೇಂದ್ರ ಭೂ ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ ಎಂದು ಇಂಡಿಯನ್ ಇಂಟರ್‌ನ್ಯಾಷನಲ್ ಇನ್‌ಫ್ರಾಸ್ಟ್ರಕ್ಚರ್ ಇಂಜಿನಿಯರ್ಸ್‌ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಸಂಸದ ಆರ್.ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆ ನಡೆಯುವಾಗ ಈ ವಿಚಾರ ಪ್ರಸ್ತಾಪವಾಯಿತು.

ಈ ವೇಳೆಯಲ್ಲಿ ಈ ಸಂಸದರು, ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾಗಿದ್ದು, ಯಾವ ಹಂತದಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್‌ಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪ್ರಧಾನ ವ್ಯವಸ್ಥಾಪಕ ಭಾಸ್ಕರ್, 32.8 ಕಿ.ಮೀ. ಉದ್ದದ ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಒಟ್ಟು ಅಂದಾಜು ವೆಚ್ಚ 156 ಕೋಟಿ ರೂ.ಗಳಾಗಿದೆ. ಅನುಮೋದಿತ ಅಂದಾಜು ನಿರ್ಮಾಣ ವೆಚ್ಚ 120 ಕೋಟಿ ರೂ.ಗಳಾಗಿದೆ. ಹೆದ್ದಾರಿಯು ಸದ್ಯ 5.5 ರಿಂದ 7 ಮೀಟರ್ ಅಗಲವಿದೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವಾಗ 10 ರಿಂದ 12 ಮೀಟರ್ ಅಗಲದ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಚಾಮರಾಜನಗರದ ಪ್ರವಾಸಿಮಂದಿರದಿಂದ ಆರ್‌ಟಿಒ ಕಚೇರಿ ಸಮೀಪದ ಟಿಪ್ಪು ವೃತ್ತದ ತನಕ 4 ಪಥದ ರಸ್ತೆಯಾಗಲಿದೆ. ಈ ಹೆದ್ದಾರಿಗೆ ಯಾವುದೇ ಭೂಸ್ವಾಧೀನ ಮಾಡಬೇಕಿಲ್ಲ. ಎಲ್ಲವೂ ಸರ್ಕಾರಿ ಜಾಗವಾಗಿದೆ ಎಂದು ಹೇಳಿದರು.

ತೆರಕಣಾಂಬಿ ಗ್ರಾಮದ ಹೊರವಲಯದಲ್ಲಿ 1.5 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಇದಕ್ಕಾಗಿ 20 ಎಕರೆ ಭೂಮಿ ಸ್ವಾಧೀನವಾಗಲಿದೆ. ಸುಮಾರು 12 ಕಿರು ಸೇತುವೆಗಳು ನಿರ್ಮಾಣಗೊಳ್ಳಲಿವೆ. ಹೆದ್ದಾರಿ ಬದಿಯ ಗ್ರಾಮಗಳಲ್ಲಿ ಚರಂಡಿ, ಪಾದಚಾರಿ ರಸ್ತೆ, ಬಸ್ ತಂಗುದಾಣ, ಬಸ್ ಬೇ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಈ ಎಲ್ಲ ಅಂಶಗಳನ್ನು ಒಳಗೊಂಡ ವಿಸ್ತೃತ ಯೋಜನಾ ವರದಿಯನ್ನು ಇಂಡಿಯನ್ ಇಂಟರ್‌ನ್ಯಾಷನಲ್ ಇನ್‌ಫ್ರಾಸ್ಟ್ರಕ್ಚರ್ ಇಂಜಿನಿಯರ್ಸ್‌ ಲಿಮಿಟೆಡ್ (ಐಐಐಇಎಲ್) ತಯಾರಿಸಿ ಅನುಮೋದನೆಗಾಗಿ ಕೇಂದ್ರ ಭೂ ಸಾರಿಗೆ ಇಲಾಖೆಗೆ ಕಳುಹಿಸಿದೆ. ಅನುಮೋದನೆ ದೊರೆತ ಬಳಿಕ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಎಲ್ಲ ವಿವರಗಳನ್ನು ಆಲಿಸಿದ ಸಂಸದರು, ದೆಹಲಿಯಲ್ಲಿರುವ ಕೇಂದ್ರದ ಭೂ ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಈ ಸಂಬಂಧ ಮಾತನಾಡಿ ಅನುಮೋದನೆ ದೊರಕಿಸುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ-150ಎ ನಲ್ಲಿ ಸಿಗುವ ಬೆಂಡರವಾಡಿ ಕೆರೆಯ ಬಳಿ ತಿರುವಿನಲ್ಲಿ ಆಗಾಗ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗಿವೆ. ಆದ್ದರಿಂದ ಹೆದ್ದಾರಿ ವಿಸ್ತರಣೆ ಆಗಬೇಕಿದೆ. ಈ ಕುರಿತು ಯಾವ ಕ್ರಮ ವಹಿಸಿ ಎಂದು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಕೊಳ್ಳೇಗಾಲ ಪಟ್ಟಣದೊಳಗೆ ಅಭಿವೃದ್ಧಿಪಡಿಸಲಾದ ರಾಷ್ಟ್ರೀಯ ಹೆದ್ದಾರಿ 209 ಮಧ್ಯದಲ್ಲಿ ಉದ್ದಕ್ಕೂ ವಿಭಜಕ ಹಾಕಲಾಗಿದೆ. ಎಂಜಿಎಸ್‌ವಿ ಶಾಲೆ ಮತ್ತು ಅಚ್ಗಾಳ್ ಯಾತ್ರಿ ನಿವಾಸದ ಬಳಿ ಸಾರ್ವಜನಿಕರಿಗೆ ಓಡಾಡಲು ಅವಕಾಶವಿಲ್ಲದಂತೆ ಮುಚ್ಚಲಾಗಿದೆ ಎಂದು ಶಾಸಕರಾದ ಎನ್.ಮಹೇಶ್, ಆರ್.ನರೇಂದ್ರ ಗಮನ ಸೆಳೆದರು.

ಪ್ರಾಧಿಕಾರದ ಎಇಇ ಕಾಂತರಾಜು ಪ್ರತಿಕ್ರಿಯಿಸಿ, ಪೊಲೀಸರು ಸೂಚಿಸಿದ ಸ್ಥಳದಲ್ಲಿ ಸಾರ್ವಜನಿಕರಿಗೆ ಓಡಾಡಲು ಅವಕಾಶ ನೀಡಲಾಗಿದೆ. ಶಾಲೆ-ಕಾಲೇಜುಗಳ ಬಳಿ ದಾರಿ ಮಾಡಿಕೊಟ್ಟರೆ ಅಪಘಾತಗಳಾದಾಗ ನಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪೊಲೀಸರು ಸೂಚಿಸಿದರೆ ಓಡಾಡಲು ದಾರಿ ಬಿಡಿಸಲಾಗುವುದು ಎಂದು ತಿಳಿಸಿದರು.

ವಿದ್ಯುತ್ ಸಂಪರ್ಕ ಕಲ್ಪಿಸಿ : ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದೊಳಗಿರುವ ಪುರಾಣಿ ಪೋಡಿನಲ್ಲಿ ಸೋಲಾರ್ ವಿದ್ಯುತ್ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಶಾಸಕ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಸೋಲಾರ್ ಘಟಕ ಆರಂಭಿಸಿದರೆ ಸಾಲದು. ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದು ನನ್ನ ಗಮನಕ್ಕೆ ಬಂದಿದೆ. ನಿರ್ವಹಣೆ ಯಾರದು ? ಎಂದು ಶಾಸಕರು ಪ್ರಶ್ನಿಸಿದರು.

ನಾನು ಒಮ್ಮೆ ಪೋಡಿಗೆ ಭೇಟಿ ನೀಡಿದ್ದೆ. ಆಗ ಸೋಲಾರ್ ವಿದ್ಯುತ್ ಸರಿಯಾಗಿ ಪೂರೈಕೆ ಆಗುತ್ತಿರಲಿಲ್ಲ. ನಿರ್ವಹಣೆ ಮಾಡುವ ಏಜೆನ್ಸಿ ಗಮನಕ್ಕೆ ತಂದು ಸರಿಪಡಿಸಿದ್ದೆ. ಮತ್ತೆ ಅದೇ ಸಮಸ್ಯೆ ಪುನರಾವರ್ತನೆಯಾದರೆ ಏಜೆನ್ಸಿ ಗಮನಕ್ಕೆ ತರಲಾಗುವುದು ಎಂದು ಸೆಸ್ಕ್ ಕೊಳ್ಳೇಗಾಲ ಉಪ ವಿಭಾಗದ ಅಧಿಕಾರಿ ಸಭೆ ಗಮನಕ್ಕೆ ತಂದರು.

ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿರುವ ಗೊಂಬೆಗಲ್ಲು, ತಾಮ್ರಪಟ್ಟಿ ಸೇರಿದಂತೆ 5 ಪೋಡುಗಳಿಗೂ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆಯಿಂದ ಅನುಮತಿ ದೊರಕಲಿಲ್ಲ. ಆದ್ದರಿಂದ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಅರಣ್ಯಾಧಿಕಾರಿಗಳು ಪೋಡುಗಳಿಗೆ ಸೋಲಾರ್ ಸಂಪರ್ಕ ಕಲ್ಪಿಸಲು ಅವಕಾಶ ನೀಡಬೇಕಿತ್ತು. ಏನೇ ಕೇಳಿದರೂ ಅವರು ದೆಹಲಿಯತ್ತ ಕೈತೋರುತ್ತಾರೆ ಎಂದು ಶಾಸಕರಾದ ಆರ್.ನರೇಂದ್ರ ಕಿಡಿಕಾರಿದರು. ಭೂಮಿಯೊಳಗೆ ಕೇಬಲ್ ಹೂತು ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಅವಕಾಶವಿಲ್ಲ ಎಂದು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ಡಾ.ಶಂಕರ್ ತಿಳಿಸಿದರು.

ಸೋಲಾರ್ ಘಟಕಗಳ ನಿರ್ವಹಣೆ ಮಾಡುವ ಏಜೆನ್ಸಿಯವರನ್ನು ಒಮ್ಮೆ ಕರೆಸಿ ಮಾತನಾಡೋಣ ಎಂದು ಶಾಸಕರಿಬ್ಬರು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್, ಶಾಸಕ ಸಿ.ಎಸ್.ನಿರಂಜನಕುಮಾರ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಡಾ.ಕೆ.ಹರೀಶಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.