ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ

ಚಾಮರಾಜನಗರ: ರೈತಪರ ಹೋರಾಟಗಾರ್ತಿ ಹಾಗೂ ರೈತರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಮುಖಂಡರು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಭುವನೇಶ್ವರಿ ವೃತ್ತ ತಲುಪಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿ, ರೈತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿಯ ಸುವರ್ಣಸೌಧದ ಎದುರು ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಕಬ್ಬಿನ ಬಾಕಿ ಹಣವನ್ನು ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮುಖ್ಯಮಂತ್ರಿ ಗೂಂಡಾಗಳೆಂದು ಕರೆದಿದ್ದಾರೆ. ರೈತ ಪರ ಹೋರಾಟಗಾರ್ತಿಯನ್ನು 4 ವರ್ಷದಿಂದ ಎಲ್ಲಿ ಮಲಗಿದ್ದೆಯಮ್ಮ ಎಂದು ನಿಂದಿಸಿ ಅಪಮಾನ ಮಾಡಿದ್ದಾರೆ. ನಾಡಿನ ಮುಖ್ಯಮಂತ್ರಿ ಸಭ್ಯತೆ ಮರೆತು ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ ಎಂದು ಖಂಡಿಸಿದರು.

ಮುಖ್ಯಮಂತ್ರಿಗಳು ಮೊದಲು ರೈತರ ಸಾಲ ಮನ್ನಾ ಘೋಷಣೆಯನ್ನು ಅನುಷ್ಠಾನಗೊಳಿಸಿ ಋಣಮುಕ್ತ ಪತ್ರವನ್ನು ರೈತರ ಮನೆಗೆ ತಲುಪಿಸಬೇಕು. ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಕಬ್ಬಿನ ಬಾಕಿ ಹಣವನು ಬಿಡುಗಡೆ ಮಾಡಿಸಲು ಮುಂದಾಗಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ರೈತ ಮೋರ್ಚಾದ ಪುಟ್ಟಸುಬ್ಬಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರಸ್ವಾಮಿ, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಮಣ್ಯ, ನಗರಸಭಾ ಸದಸ್ಯ ಸುದರ್ಶನಗೌಡ, ಮುಖಂಡರಾದ ಸುಂದರರಾಜ್, ಉಮ್ಮತ್ತೂರು ನಾಗೇಶ್, ಕಾಗಲವಾಡಿ ಶಿವಸ್ವಾಮಿ, ಮೂಡ್ಲುಪುರ ನಂದೀಶ್, ಪುಟ್ಟರಸು, ಶಿವಣ್ಣ ಇತರರು ಪಾಲ್ಗೊಂಡಿದ್ದರು.