ನೂತನ ವಿವಿ ಸಮಾನತೆ, ಶಾಂತಿ ಸಂದೇಶ ಸಾರಲಿ

ಚಾಮರಾಜನಗರ: ತಲೆ ಎತ್ತಲಿರುವ ನಳಂದ ಬೌದ್ಧ ವಿಶ್ವವಿದ್ಯಾಲಯವು ಸಮಾನತೆ ಮತ್ತು ಶಾಂತಿಯ ಸಂದೇಶ ಸಾರಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಉತ್ತವಳ್ಳಿ ಗ್ರಾಮದ ಸಮೀಪದ ಯಡಬೆಟ್ಟದಲ್ಲಿ ಶನಿವಾರ ನಳಂದ ಬೌದ್ಧ ವಿಶ್ವವಿದ್ಯಾಲಯ ಹಾಗೂ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರಕ್ಕೆ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿರುವ ಶೋಷಿತರಿಗೆ ಸಮಾನತೆ ಮತ್ತು ಸ್ವಾಭಿಮಾನ ಬೇಕಿದೆ. ಇದನ್ನು ದೊರಕಿಸುವ ಕಾರ್ಯವನ್ನು ನಳಂದ ವಿವಿಯು ಮಾಡಬೇಕು. ಬುದ್ಧ ಧರ್ಮ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಅದರಲ್ಲಿ ಮೇಲು ಕೀಳೆಂಬ ಭಾವ ಹಾಗೂ ಜಾತಿಯಿಲ್ಲ ಎಂದು ತಿಳಿಸಿದರು.
ಬುದ್ಧನು ನಾನು ದೇವರಲ್ಲ ಒಬ್ಬ ಮಾರ್ಗದರ್ಶಕ ಎಂದು ಹೇಳಿದ್ದಾನೆ. ಬೌದ್ಧ ಧರ್ಮ ಒಂದು ಜೀವನ ಕ್ರಮವಾಗಿದೆ. ಅಂಬೇಡ್ಕರ್ ಅವರು ದೇಶದಲ್ಲಿ ಬೌದ್ಧ ಧರ್ಮವನ್ನು ಪುನರುಜ್ಜೀವನಗೊಳಿಸಿದ್ದಾರೆ. ಅವರು 1935 ರಲ್ಲಿ ಶಿಕ್ಷಣ ಮುಗಿಸಿದ ನಂತರ ಶೋಷಿತರ ಪರ ಹೋರಾಟ ನಡೆಸಿದರು. ಎಲ್ಲ ಧರ್ಮಗಳ ಬಗ್ಗೆಯೂ 1956ರವರೆಗೆ ಅಧ್ಯಯನ ಮಾಡಿ ಕೊನೆಗೆ ಬೌದ್ಧ ಧರ್ಮವನ್ನು ಸೇರಿದರು ಎಂದು ತಿಳಿಸಿದರು.

ನಳಂದ ವಿವಿಯು 5ನೇ ಶತಮಾನದಲ್ಲಿ ಇಂದಿನ ಬಿಹಾರದ ಮಗಧ್‌ನಲ್ಲಿ ಸ್ಥಾಪನೆಯಾಗಿತ್ತು. ಲಕ್ಷಾಂತರ ಜನರು ಇಲ್ಲಿ ಜ್ಞಾನ ಸಂಪಾದನೆ ಮಾಡಿದ್ದರು. ಜ್ಞಾನಾರ್ಜನೆ ಅತಿ ಮುಖ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

13-14ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಬೌದ್ಧ ಭಿಕ್ಕುಗಳಿಗೆ ಮೊಘಲರು ತೊಂದರೆ ನೀಡಿದ್ದರಿಂದ ಟಿಬೆಟ್, ಪಶ್ಚಿಮ ಬಂಗಾಳ, ದಕ್ಷಿಣ ಭಾರತದತ್ತ ಓಡಿಹೋದರು. ಕರ್ನಾಟಕದಲ್ಲೂ ಬೌದ್ಧ ಧರ್ಮ ಬೆಳೆದಿತ್ತು ಎಂಬುದಕ್ಕೆ ಸೇಡಂ ಹಾಗೂ ಇತರೆ ಸ್ಥಳಗಳಲ್ಲಿ ದೊರೆತಿರುವ ಶಾಸನಗಳೇ ಸಾಕ್ಷಿ ಎಂದರು.

ನಳಂದ ಬೌದ್ಧ ವಿವಿಯಲ್ಲಿ ಗ್ರಂಥಾಲಯ ತೆರೆಯಲು ತುಮಕೂರಿನ ತಮ್ಮ ಸಿದ್ಧಾರ್ಥ ಸಂಸ್ಥೆಯಿಂದ 50 ಲಕ್ಷ ರೂ. ನೀಡಲಾಗುವುದು. ಇನ್ನು ಹೆಚ್ಚಿನ ಅನುದಾನ ಬೇಕಿದ್ದರೆ ಸರ್ಕಾರದಿಂದ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಧಮ್ಮ ಧ್ವಜಾರೋಹಣ ನೆರವೇರಿಸಿದ ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಬುದ್ಧನ ಸಂದೇಶಗಳನ್ನು ಸಾರಲು ನಳಂದ ವಿವಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು 10 ವರ್ಷದ ಪ್ರಯತ್ನವಾಗಿದ್ದು ಈಗ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಅವರು 25 ಎಕರೆ ಭೂಮಿ ಹಾಗೂ 10 ಕೋಟಿ ರೂ. ಅನುದಾನವನ್ನು ಉದಾರವಾಗಿ ನೀಡಿದ್ದರು ಎಂದು ಕೃತಜ್ಞತೆ ಸಲ್ಲಿಸಿದರು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪರಿಶಿಷ್ಟರ ಕಲ್ಯಾಣಕ್ಕೆ 27800 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಇಷ್ಟೊಂದು ಹೆಚ್ಚು ಹಣವನ್ನು ಮೀಸಲಿಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದ ಅವರು, ನಳಂದ ಬೌದ್ಧ ವಿವಿ ನಿರ್ಮಾಣ ಕಾಮಗಾರಿಯನ್ನು ಸರ್ಕಾರದ ರೈಟ್ ಸಂಸ್ಥೆಗೆ ವಹಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಎನ್.ಮಹೇಶ್ ಮಾತನಾಡಿ, ಕರ್ನಾಟಕವೂ ಅಶೋಕ ಚಕ್ರವರ್ತಿಯ ಆಳ್ವಿಕೆಗೆ ಒಳಪಟ್ಟಿತ್ತು. ಆತ ಬೌದ್ಧ ಧರ್ಮದ ಪ್ರಚಾರಕ್ಕೆ ಮಹದೇವ, ರಖ್ಖಿತ, ಮಂಜುಶ್ರಿ ಎಂಬ ಭಿಕ್ಕುಗಳನ್ನು ಕಳುಹಿಸಿಕೊಟ್ಟಿದ್ದ ಎಂಬುದಕ್ಕೆ ದಾಖಲೆಗಳಿವೆ ಎಂದರು.

ಇಂಟರ್‌ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಭಂತೇ ಬೋಧಿದತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಧಮ್ಮ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಆರ್.ನರೇಂದ್ರ, ಮಹಾಬೋಧಿ ಸೊಸೈಟಿಯ ಭಂತೆ ಆನಂದ ಮಹಾಥೇರ ಮಾತನಾಡಿದರು. ಟ್ರಸ್ಟ್‌ನ ಅಧ್ಯಕ್ಷ ಭಂತೇ ಧಮ್ಮಾನಂದ ಥೇರ, ಉಪಾಧ್ಯಕ್ಷ ಭಂತೆ ಮನೋರಖ್ಖಿತ ಥೇರ, ರಷ್ಯಾದ ಭಂತೆ ಕೇಮಿಂದಾ ಹಾಗೂ ಬೌದ್ಧ ಭಿಕ್ಕುಗಳು ಹಾಜರಿದ್ದರು.