ಪ್ರತಿಭಟನೆಗೆ ಮುಂದಾದ ಬಿಜೆಪಿ ಕಾರ್ಯಕರ್ತರ ಬಂಧನ

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ವಿರುದ್ಧ ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಶನಿವಾರ ಬೆಳಗ್ಗೆ ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಗಣರಾಜೋತ್ಸವ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲು ಮುಂದಾದ ಬಿಜೆಪಿ ಕಾರ್ಯಕರ್ತರು ಹಾಗೂ ನಗರಸಭಾ ಸದಸ್ಯರನ್ನು ಬಂಧಿಸಲಾಯಿತು.
ಬೆಂಗಳೂರಿನ ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಅವರ ಸಿಬ್ಬಂದಿ ಮೋಹನ್ 25.76 ಲಕ್ಷ ರೂ. ಸಾಗಣೆ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆ ಹಣವನ್ನು ಸಚಿವರಿಗೆ ನೀಡಲು ಕೊಂಡೊಯ್ಯುತ್ತಿದ್ದಾಗ ಸಿಬ್ಬಂದಿ ಎಸಿಬಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಆದ್ದರಿಂದ ಸಚಿವರಿಗೆ ಧ್ವಜಾರೋಹಣ ಮಾಡಲು ನೈತಿಕತೆಯಿಲ್ಲ ಎಂದು ಖಂಡಿಸಿದರು.
ಕಾಮಗಾರಿಗೆ ಬೇಗ ಅನುದಾನ ಬಿಡುಗಡೆ ಮಾಡಿಸಲು ಗುತ್ತಿಗೆದಾರರು ಸಚಿವರಿಗೆ ಹಣ ನೀಡಿದ್ದರು. ಅದನ್ನು ಸಿಬ್ಬಂದಿ ಸಾಗಣೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ನಗರಸಭಾ ಸದಸ್ಯರಾದ ಸುದರ್ಶನಗೌಡ, ಕುಮುದಾ, ಗಾಯತ್ರಿ, ಗೌರಿ, ಆಶಾ, ಮನೋಜ್‌ಪಟೇಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರೊಂದು ಶೆಟ್ಟಿ, ಎಸ್ಟಿ ಮೋರ್ಚಾದ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾಯಕ, ಮುಖಂಡರಾದ ಪುರುಷೋತ್ತಮ, ಸುಂದ್ರಪ್ಪ, ಸುಂದರರಾಜು ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ದಿಢೀರ್ ಪ್ರತಿಭಟನೆ
ಗಣರಾಜೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇಳೆ ಬಿಜೆಪಿ ಮೂವರು ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷರಾದ ಬಿಜೆಪಿ ಕಾರ್ಯಕರ್ತರಾದ ಹೇಮಂತ್‌ಕುಮಾರ್, ರಾಜು, ಶೈಲೇಂದ್ರ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ತಕ್ಷಣ ಕ್ರೀಡಾಂಗಣದಲ್ಲಿದ್ದವರು ಕಕ್ಕಾಬಿಕ್ಕಿಯಾದರು. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ತಕ್ಷಣ ಪೊಲೀಸರು ಮೂವರು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಕ್ರೀಡಾಂಗಣದಿಂದ ಕರೆದೊಯ್ದರು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮುನ್ನೂಚನೆ ಇತ್ತು. ಎಲ್ಲರನ್ನು ತಪಾಸಣೆ ಮಾಡಿ ಕ್ರೀಡಾಂಗಣದೊಳಗೆ ಬಿಡಲಾಗುತ್ತಿತ್ತು. ಆದರೂ ಮೂವರು ಬಿಜೆಪಿ ಕಾರ್ಯಕರ್ತರು ಹೇಗೆ ಒಳಗೆ ಬಂದು ಪ್ರತಿಭಟನೆ ನಡೆಸಿದರು ಎಂಬ ಬಗ್ಗೆ ಚರ್ಚೆ ನಡೆಯಿತು.