15ರಂದು ಕಾಂಗ್ರೆಸ್ ಪರಿವರ್ತನಾ ಯಾತ್ರೆ

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾ.15 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಯಾತ್ರೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಸತೀಶ್‌ಜಾರಕಿಹೊಳಿ, ಸಿ.ಎಂ.ಇಬ್ರಾಹಿಂ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜಿಲ್ಲೆಯ 4 ಮತ್ತು ಮೈಸೂರು ಜಿಲ್ಲೆಯ 4 ಕ್ಷೇತ್ರಗಳ ಒಟ್ಟು 20 ಸಾವಿರಕ್ಕೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಳೆದ 5 ವರ್ಷಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವೈಫಲ್ಯಗಳು, ರಾಜ್ಯದಲ್ಲಿ ಹಿಂದಿದ್ದ ಕಾಂಗ್ರೆಸ್ ಸರ್ಕಾರ ಮತ್ತು ಪ್ರಸಕ್ತ ಆಡಳಿತರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಾಧನೆಗಳನ್ನು ಸಮಾವೇಶದಲ್ಲಿ ತಿಳಿಸಲಾಗುವುದು. ಈ ಕಾರ್ಯವನ್ನು ಕಾಂಗ್ರೆಸ್ ಹಿರಿಯ ನಾಯಕರು ನಡೆಸಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್ ನಾಯಕರು ಆಹ್ವಾನಿಸಿದರೆ ಅವರ ಪರ ಪ್ರಚಾರ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಈ ಕುರಿತು ಗೊತ್ತಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಲೋಕಸಭಾ ಕ್ಷೇತ್ರದಲ್ಲಿ ಹಿಂದಿಗಿಂತಲೂ ಪರಿಸ್ಥಿತಿ ಭಿನ್ನವಾಗಿರಬಹುದು. ಆದರೆ ಸಂಸದರಾದ ಆರ್.ಧ್ರುವನಾರಾಯಣ್ ಅವರು ಕ್ಷೇತ್ರಾದ್ಯಂತ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ಆದ್ದರಿಂದ ಹಿಂದಿಗಿಂತಲೂ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಯಾರಾದರೂ ಒಬ್ಬರು ಸ್ಪರ್ಧಿಸಲೇಬೇಕು. ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಬಿಜೆಪಿ ಅಭ್ಯರ್ಥಿಯಾದರೂ ಏನೂ ಆಗುವುದಿಲ್ಲ. ಸಂಸದರು ಕ್ಷೇತ್ರದಲ್ಲಿ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಎಸ್ಪಿಯಿಂದಲೂ ಅಭ್ಯರ್ಥಿ ನಿಂತರೂ ಕಾಂಗ್ರೆಸ್‌ಗೆ ತೊಂದರೆ ಆಗುವುದಿಲ್ಲ. ಅವರ ಸಾಂಪ್ರದಾಯಿಕ ಮತಗಳಿಂದ ನಮಗೆ ಧಕ್ಕೆಯಾಗದು. ನಾಲ್ವರು ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ದುಡಿದು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಜಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಹಾಜರಿದ್ದರು.

ನೀರಿನ ರಾಜಕೀಯವಿಲ್ಲ: ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ಪಷ್ಟಪಡಿಸಿದರು. ಹುತ್ತೂರು ಕೆರೆಯಿಂದ ವಡ್ಡಗೆರೆ ಹಾಗೂ ಇತರ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಕಾರ್ಯಕ್ರಮವನ್ನು ಮುಂದೂಡಲು ರಾಜಕೀಯ ಕಾರಣವಲ್ಲ. ಕಾಮಗಾರಿ ಪೂರ್ಣಗೊಳ್ಳದಿರುವುದೇ ಕಾರಣ ಎಂದರು.

ಹುತ್ತೂರು ಕೆರೆಯಿಂದ ವಡ್ಡಗೆರೆ ಮತ್ತು ಅರಕಲವಾಡಿ ಸುವರ್ಣನಗರ ಕೆರೆಗೆ ನೀರು ತುಂಬಿಸಲು ನಿರ್ಮಿಸಿರುವ ನೀರಿನ ಘಟಕದ ಕಾಮಗಾರಿ ಪೂರ್ಣಗೊಂಡಿಲ್ಲ. ಈಗ ನೀರು ಹರಿಸಿದರೆ ಒಂದು ಭಾಗದ ಕೆರೆಗಳಿಗೆ ಮಾತ್ರ ನೀರು ಹೆಚ್ಚಾಗಿ ಹೋಗಲಿದೆ. ಇದನ್ನು ಸರಿಪಡಿಸಬೇಕಿರುವುದರಿಂದ ನೀರು ತುಂಬಿಸುವ ಕಾರ್ಯಕ್ರಮವನ್ನು ಮುಂದೂಡಲಾಯಿತು ಎಂದರು.

ಲೋಕಸಭಾ ಚುನಾವಣೆ ಮುಗಿಯುವ ತನಕ ಈ ಕಾರ್ಯಕ್ರಮ ನಡೆಯುವುದಿಲ್ಲ. ಇದಾದ ನಂತರ ಹುತ್ತೂರು ಕೆರೆಯಿಂದ ವಡ್ಡಗೆರೆ ಮತ್ತು ಅರಕಲವಾಡಿ ಸುವರ್ಣನಗರ ಕೆರೆಗೆ ಹಾಗೂ ಆನೆಮಡುವಿನ ಕೆರೆಗೂ ನೀರು ಹರಿಸಲಾಗುವುದು ಎಂದು ತಿಳಿಸಿದರು.