ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ

ಚಾಮರಾಜನಗರ: ನಂಜನಗೂಡು ತಾಲೂಕಿನ ಚಾಮಲಾಪುರಹುಂಡಿಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಸಮಿತಿಯ ಪದಾಧಿಕಾರಿಗಳು ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿದರು. ಅತ್ಯಾಚಾರ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನ.16ರಂದು ಚಾಮಲಾಪುರಹುಂಡಿಯ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ. ಸಮಾಜದಲ್ಲಿ ಬಡ ಕುಟುಂಬಗಳಿಗೆ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಜನರು ಕಂಗಾಲಾಗಿ ಭಯಭೀತರಾಗಿದ್ದಾರೆ ಎಂದರು.

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ಸ್ಥಳೀಯ ಶಾಸಕರು ಸಾಂತ್ವನ ಹೇಳುವ ಮನಸ್ಸು ಮಾಡದಿರುವುದು ದುರಂತ. ಇಂತಹ ಅಮಾನವೀಯ ಕೃತ್ಯಗಳು ಮರುಕಳಿಸದಂತೆ ಕ್ರಮವಹಿಸಬೇಕು. ಕೃತ್ಯವೆಸಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಜತೆಗೆ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಡಲಾಯಿತು. ಸಮಿತಿಯ ಅಧ್ಯಕ್ಷ ಬಾಗಳಿ ರೇವಣ್ಣ, ಯಳಂದೂರು ತಾಲೂಕು ಉಪ್ಪಾರ ಯುವಕರ ಸಂಘದ ಅಧ್ಯಕ್ಷ ವೈ.ಕೆ.ಮೋಳೆ ಪಿ.ಮಾದೇಶ್, ಮುಖಂಡರಾದ ಸೋಮಣ್ಣ ಉಪ್ಪಾರ್, ಮಹದೇವಶೆಟ್ಟಿ, ಲಿಂಗರಾಜು, ಗಿರೀಶ್, ಸ್ವಾಮಿ, ಆನಂದ್ ಉಪ್ಪಾರ್, ಶಿವಶಂಕರ್, ಜಿ.ಎಂ.ಶಂಕರ್ ಇತರರು ಪಾಲ್ಗೊಂಡಿದ್ದರು.