ಬೇಡಿಕೆಗಳ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಚಾಮರಾಜನಗರ: ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೆ ಕಾರ್ಮಿಕರ ಬೆನ್ನುಮೂಳೆಯನ್ನು ಮುರಿಯುತ್ತಿವೆ. ಕಾರ್ಮಿಕ ಇಲಾಖೆಯಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಿದ್ದು ಅದನ್ನು ಕಾರ್ಮಿಕ ಕಲ್ಯಾಣಕ್ಕೆ ಉಪಯೋಗಿಸದೆ ಅನ್ಯಾಯ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾ ಕಾರ್ಮಿಕ ಇಲಾಖೆಗೆ ಕಾರ್ಮಿಕ ಅಧಿಕಾರಿಯನ್ನು ನೇಮಿಸಬೇಕು. ಕಾರ್ಮಿಕರಿಗೆ 60 ವರ್ಷಕ್ಕೆ ವಿಶ್ರಾಂತಿ ವೇತನ ನೀಡಲಾಗುತ್ತಿದ್ದು ಇದನ್ನು 50 ವರ್ಷಗಳಿಗೆ ಇಳಿಸಿ ವಿಶ್ರಾಂತಿ ವೇತನವನ್ನು ಒಂದು ಸಾವಿರ ರೂ.ಗಳಿಂದ 3 ಸಾವಿರ ರೂ.ಗಳಿಗೆ ಏರಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ 2 ಲಕ್ಷದವರೆಗೆ ನೇರ ಸಾಲ ಸೌಲಭ್ಯ ನೀಡಬೇಕು ಎಂದರು.

ನೋಂದಣಿಯಾಗಿರುವ ಕಾರ್ಮಿಕ ಸಂಘಗಳಿಗೆ ಸಂಘ ಮುನ್ನಡೆಸಲು ಖಾಲಿ ನಿವೇಶನವನ್ನು ನೀಡಬೇಕು. ಕಾರ್ಮಿಕರಲ್ಲದ ಅನೇಕರು ಸೌಲಭ್ಯದ ಆಸೆಗಾಗಿ ಅಕ್ರಮ ನೋಂದಣಿ ಮಾಡಿಸಿರುವುದನ್ನು ಪತ್ತೆ ಹಚ್ಚಿ ರದ್ದುಪಡಿಸಬೇಕು. ಇಲಾಖೆಯಲ್ಲಿ ನಡೆಯುತ್ತಿರುವ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಎಸ್ಸಿ, ಎಸ್ಟಿ ನಿಗಮ ಸೇರಿದಂತೆ ಇತರೆ ನಿಗಮಗಳಲ್ಲಿ ಸಾಲ ಸೌಲಭ್ಯಗಳನ್ನು ನೋಂದಾಯಿತ ಕಾರ್ಮಿಕರಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೋಂದಾಯಿತ ಕಾರ್ಮಿಕರಿಗೆ ಸಾಲ ಸೌಲಭ್ಯ ನೀಡಬೇಕು. ಜತೆಗೆ ಕಾರ್ಮಿಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸಬೇಕು. ಮದುವೆಯ ಸಹಾಯಧನವನ್ನು 1 ಲಕ್ಷ ರೂ.ಗಳಿಗೆ ಏರಿಸಬೇಕು ಎಂದು ಕೋರಿದರು.